ಕಲ್ಬೆಂಚು
ನನಗೂ ವಯಸ್ಸು ಎಂಭತ್ತು ಮೀರಿತ್ತು. ಊರುಗೋಲು ಸಹಾಯಕ್ಕೆ ಬಂದು ಹತ್ತು ವರ್ಷದ ಮೇಲಾಗಿತ್ತು. ಈಚೆಗೆ, ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಿದ್ದೆ. ಮನೆ ಇದ್ದದ್ದು ಒಳ್ಳೆಯ ಬಡಾವಣೆಯಲ್ಲೇ. ಅಕ್ಕ ಪಕ್ಕದವರೂ ಒಳ್ಳೆಯವರೇ. ಆದರೂ ಒಂದು ರೀತಿಯ ಭಯ. ಮೊದಮೊದಲು ಏಕಾಂತ ಬೇಕಾಗಿತ್ತು. ಕ್ರಮೇಣವಾಗಿ ಏಕಾಂತ ಏಕಾಂಗಿತನವಾಯಿತು. ನಂತರ ಜನರ ಸಂಪರ್ಕವೆಂದರೆ ಒಂದು ರೀತಿಯ ರೇಜಿಗೆ. ಈಗ, ಜನರನ್ನು ಕಂಡರೆ ಒಂದು ರೀತಿಯ ಭಯ.
Easychairನಲ್ಲಿ ಕುಳಿತು ಕಾನಡ ರಾಗದ ಆಲಾಪನೆ ಕೇಳುತ್ತಿದ್ದೆ. ಬೆಳಗಿನ ತಿಂಡಿ ಮುಗಿದಿತ್ತು. ರಂಗಪ್ಪ ಊಟಕ್ಕೆ ತಿಳಿಸಾರು, ಅನ್ನ ಮಾಡಿ ಒಂದೆರಡು ಎಸಳು ಈರುಳ್ಳಿ ಕೂಡ Dining Table ಮೇಲಿಟ್ಟು ಹೋಗಿದ್ದ. ನನ್ನ ಅತಿ ಸಣ್ಣ ಬೇಡಿಕೆಗಳೂ ಅವನಿಗೆ ತಿಳಿದ್ದಿದ್ದರಿಂದಲೇ ನನ್ನವರೆಲ್ಲರು ದೂರವಾದಮೇಲೂ ಅವನಿಗೆ ನನ್ನ ಮನೆಯಲ್ಲಿ, ಮನಸ್ಸಿನಲ್ಲಿ ಸ್ವಲ್ಪ ಜಾಗವಿತ್ತು. ಹೂ...ನನ್ನ ಅಸಹಾಯಕತೆಯು ಅದಕ್ಕೊಂದು ಕಾರಣವಿರಬಹುದು. ಇತ್ತೀಚೆಗೆ ನನ್ನ ಊರುಗೋಲಿನ ನಂತರ ಈತನೇ ನನಗೆ ಮುಖ್ಯವಾದವನು. Important...not close. Close.. but not close enough.
Laptop ಪಕ್ಕದಲ್ಲಿದ್ದ ಮೊಬೈಲ್ ರಿಂಗಣಿಸಿತು. ಮೆಡಿಕಲ್ ಸ್ಟೋರಿನಿಂದ ಕರೆ ಬರುತ್ತಿತ್ತು.
"ಹೇಳಿ"
"ಸಾರ್...ನಿಮ್ಮ ಔಷದಿ pack ಮಾಡಿದ್ದೀವಿ. " ಎಂದ ಅಂಗಡಿಯವ.
"ಸರಿ, ಎಂದಿನಂತೆ ಮನೆಗೆ ಕಳಿಸಿ. "
"ಹುಡುಗ ರಜೆಯಲ್ಲಿದಾನೆ ಸಾರ್. ನೀವೇ ಯಾರಾದ್ರೂ ಬಂದ್ರೆ..."
"ಅಲ್ಲಯ್ಯ..ನಾನು ಬರೋದೇ..?ನೀನೆ ಬಾ..ಐವತ್ತು ರೂಪಾಯಿ ಹೆಚ್ಚು ಕೊಡ್ತೀನಿ" ಮನೆಯಿಂದ ಕಾಲು ಆಚೆ ಇಡುವ ಶಕ್ತಿ, ತಾಳ್ಮೆ ಎರಡೂ ನನಗಿರಲಿಲ್ಲ.
"ಇಲ್ಲ ಸಾರ್. ಬೇಕಿದ್ರೆ ಯಾರ್ನಾದ್ರು ಕಳಿಸಿ. ಅಥವಾ ನೀವೇ ಬನ್ನಿ. ಇವತ್ತು ನನ್ನ ಬಿಟ್ರೆ ಇಲ್ಲಿ ಯಾರು ಇಲ್ಲ. " ಎಂದು ಗಡುಸಾಗಿ ಮಾತಾಡಿ ಸ್ಟೋರಿನವ ಫೋನ್ ಇಟ್ಟ.
ಇತ್ತ ರಂಗಪ್ಪ ಮತ್ತೆ ಬರುವುದು ನಾಳೆ ಮುಂಜಾನೆ, ತಿಂಡಿ ಮಾಡುವುದಕ್ಕೆ. ಹೊರಡುವಾಗ ಆತ "ಇದು ಬೆಳಗಿನ ಬಿಪಿ ಮಾತ್ರೆ. ಸಂಜೆ ಹೊತ್ತಿಗೆ ಔಷಧಿ ಕಳಿಸ್ತಾರೆ. ಅದ್ರಿಂದ ನೀವು ತೊಗೋಬೇಕು" ಎಂದು ಹೇಳಿ ಹೋಗಿದ್ದ. ಒಂದು ಹೊತ್ತು ಬಿಪಿ ಮಾತ್ರೆ ತಪ್ಪಿದರೆ ಪ್ರಾಣವೇನು ಹೋಗುತ್ತಿರಲಿಲ್ಲ. ಆದರೂ ಜೀವದ ಮೇಲೆ ವ್ಯಾಮೋಹ. ಊಟ ತಪ್ಪಿದರೂ ಮಾತ್ರೆ ತಪ್ಪಬಾರದು ಎಂಬ ನಿರರ್ಥಕ ಶಿಸ್ತು. ಒಂದು ಸಾರಿ ಹೊರಗೆ ಹೋಗಿಬಂದರೆ ಕನಿಷ್ಠ ಒಂದು ದಿನವೆಲ್ಲ ಸುಧಾರಿಸಿಕೊಳ್ಳಬೇಕಾಗಬಹುದು ಎಂಬುದು ತಿಳಿದಿದ್ದರೂ ಮೆಡಿಕಲ್ ಸ್ಟೋರ್ಗೆ ನಾನೇ ಹೋಗಿಬರಲು ನಿರ್ಧರಿಸಿದೆ.
ಬಾಗಿಲು ತೆರೆದಾಕ್ಷಣ ಮಧ್ಯಾಹ್ನದ ಬಿಸಿಲು ಕಣ್ಣಿಗೆ ರಾಚಿತು. ಮನೆಯಾಚೆ ಕಾಲಿಟ್ಟು ಒಂದು ತಿಂಗಳಾಗಿರಬಹುದು. ಮನೆಯೊಳಗಿನ ಮಂದ ಬೆಳಕಿಗೆ ಕಣ್ಣು, ಮನಸ್ಸು, ಒಗ್ಗಿ ಹೋಗಿತ್ತು. ಹೊರಗಿನ ಬೆಳಕಿನ ಆಡಂಬರಕ್ಕಿಂತ ಮನೆಯ ಮಂದ ಬೆಳಕು ಹೆಚ್ಚಿನ ನೆಮ್ಮದಿ ನೀಡಿತ್ತು. ಕೈಯಲ್ಲಿ ಊರುಗೋಲು ಹಿಡಿದು ರಂಗಪ್ಪನನ್ನು, ಮೆಡಿಕಲ್ ಸ್ಟೋರಿನವನನ್ನು, ನನ್ನ ಅಸಹಾಯಕತೆಯನ್ನು ಶಪಿಸುತ್ತ ಮೆಡಿಕಲ್ ಸ್ಟೋರಿನತ್ತ ನಡೆದೆ.
ಸ್ಟೋರ್ ಇದ್ದದ್ದು ಮನೆಯಿಂದ ಅರ್ಧ ಮೈಲಿ ದೂರದಲ್ಲಿ. ಮನೆಯಿಂದ ಸ್ವಲ್ಪ ದೂರ ಬಂದು, ಮುಖ್ಯ ರಸ್ತೆ ಹೊಕ್ಕು, ಸ್ವಲ್ಪ ದೂರ ನಡೆದರೆ ಅಲ್ಲೊಂದು ಕ್ರಾಸಿಂಗ್. ಅದನ್ನು ದಾಟಿದರೆ, ಬಲಕ್ಕೆ ಸ್ವಲ್ಪ ದೂರದಲ್ಲಿ ಮೆಡಿಕಲ್ ಸ್ಟೋರ್. ಈ ರಸ್ತೆ ದಾಟುವುದೊಂದೇ, ಈ ಅರ್ಧ ಮೈಲಿ "ಯಾತ್ರೆ"ಯ ತೊಂದರೆ. ಯೌವ್ವನದಲ್ಲಿ ಪರ್ವತಗಳನ್ನು ಸರಾಗವಾಗಿ ಹತ್ತಿದ್ದ ನನಗೆ, ಈಗ ರಸ್ತೆ ದಾಟುವುದೆಂದರೆ ವಿಪರೀತ ಭಯ. ಜೊತೆಗೆ ಮುಜುಗರ. ಯಾರನ್ನಾದರು ಸಹಾಯ ಬೇಡಬೇಕು. ಅವರು ನನ್ನನ್ನು ಹಿಡಿದು ರಸ್ತೆ ದಾಟಿಸುತ್ತಾರೆ. ಅವರ ಪರಿಚಯವೇ ಇಲ್ಲದಿದ್ದರು ಅವರು ನನ್ನನ್ನು ಮುಟ್ಟಲು ಬಿಡಬೇಕು. ನಂತರ ಕೃತಕ ಕೃತಜ್ಞತೆಯ ನಗು. ಸಹಾಯ ಮಾಡುವವರಿಗೂ ಒಂದು ಸ್ವಾರ್ಥವಿರುತ್ತದೆ ಎಂಬುದು ನನ್ನ ವಾದ. ನಾನು ನನ್ನ ಕೆಲಸಕ್ಕೆ ರಸ್ತೆ ದಾಟಬೇಕು. ಅವರು, ಅವರ ಆತ್ಮತೃಪ್ತಿಗೆ ನನ್ನನ್ನು ಕೈ ಹಿಡಿದು ದಾಟಿಸುತ್ತಾರೆ. You can assist only those who want your assistance.
ಆ ದಿನ ನನ್ನನ್ನು ರಸ್ತೆ ದಾಟಿಸಿದ್ದು ಒಬ್ಬ ಮಧ್ಯ ವಯಸ್ಕ. ನನ್ನ ಮಗ ಕಿಶೋರನಿಗೂ ಇವನಷ್ಟೆ ವಯಸ್ಸಿರಬಹುದು. ಆದರೆ ಅವನ ಮುಖ ಈತನಿಗಿಂತ ಎಷ್ಟೋ ಕಳೆಯಾಗಿದೆ. Ph.D ಮಾಡಿರುವವನ ಕಳೆ. ದೇಶಗಳನ್ನು ಸುತ್ತಿ, ಕೋಶವನ್ನು ಓದಿದ ಬುದ್ಧಿಜೀವಿಯ ಕಳೆ . ವಾರಕ್ಕೊಂದು ಫೋನ್ ಮಾಡಿ ಮಗನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಿರುವವನ ಕಳೆ. ದೇಶವನ್ನು ಬಿಟ್ಟು ಪರದೇಶಿಯಾಗಿ ಸಂಸ್ಕೃತಿ-ಸಂಪ್ರದಾಯಗಳನ್ನು ಮೆರೆಯುತ್ತಿರುವವನ ಕಳೆ.
ರಸ್ತೆ ದಾಟಿಸಿದ ಪುಣ್ಯಾತ್ಮ ಕಣ್ಣೆದುರಿಂದ, ಮನಸ್ಸಿನಿಂದ ಮರೆಯಾದ. ಆದರೆ ಮಗನ ಮುಖ ಮಾತ್ರ ಕಣ್ಣ ಮುಂದೆಯೇ ನಿಂತಿತ್ತು. ಮೈ ಮನಸ್ಸುಗಳನ್ನು ಕೊಡವಿಕೊಂಡು ಮೆಡಿಕಲ್ ಸ್ಟೋರ್ ಕಡೆಗೆ ನಡೆದೆ.
ಸ್ಟೋರಿನಿಂದ ಸ್ವಲ್ಪ ದೂರದಲ್ಲಿರುವಾಗಲೇ ಅಂಗಡಿಯವ ನನ್ನನ್ನು ಗುರುತು ಹಿಡಿದ. ಮೊದಲೇ ಔಷಧಿಗಳನ್ನು pack ಮಾಡಿದ್ಧ. ನಾನು ಪ್ಯಾಂಟ್ ಜೇಬಿನಲ್ಲಿ ಹಣ ಇರುವುದು ಖಾತ್ರಿ ಮಾಡಿಕೊಂಡೆ. ಕಿಶೋರ ಎಷ್ಟೋ ಬಾರಿ Wallet ಉಪಯೋಗಿಸಲು ಒತ್ತಾಯ ಮಾಡಿ ಸೋತಿದ್ದ. ಸಂಪಾದನೆ ಮಾಡಿದ್ದ ಅಲ್ಪ-ಸ್ವಲ್ಪ ಹಣವನ್ನು ಜೋಪಾನ ಮಾಡಲು ಮತ್ತೆ ಖರ್ಚು ಮಾಡಿ Wallet ಕೊಳ್ಳುವ ಪ್ರಮೇಯವೇನು ಇಲ್ಲವೆಂಬುದು ನನ್ನ ವಾದ. ಹಣ ಕಷ್ಟಪಟ್ಟು ಸಂಪಾದಿಸಿದ್ದರೆ ಅದನ್ನು ಜೋಪಾನ ಮಾಡುವ ಶಿಸ್ತು ತಾನಾಗಿಯೇ ಬರುತ್ತದೆ.
"ತಪ್ಪು ತಿಳಿಬೇಡಿ ಸಾರ್.. ಇವತ್ತು ಅಂಗಡಿಯಲ್ಲಿ ನನ್ನ ಬಿಟ್ಟರೆ ಯಾರು ಇಲ್ಲ.." ಎಂದ ಅಂಗಡಿಯವ, ಔಷಧಿ ಪ್ಯಾಕೇಜ್ ಕೊಡುತ್ತ.
"ಪರವಾಗಿಲ್ಲ ಬಿಡಿ" ಎಂದೇ ನಾನು, ದುಡ್ಡು ಎಣಿಸುತ್ತ. ಅಂಗಡಿಯವನಿಗೆ ದುಡ್ಡು ಕೊಟ್ಟು ಹೊರಟೆ.
"Thank You Sir. Sorry for the inconvenience" ಎಂಬ ಅವನ ಮಾತಿಗೆ ಸ್ಪಂದಿಸುವ ಅವಶ್ಯಕತೆಯೇನು ಕಾಣಲಿಲ್ಲ.
ಮೆಡಿಕಲ್ ಸ್ಟೋರಿಗೆ ಬರುವಾಗ ನನ್ನ ಕಣ್ಣಿಗೆ ಬಿದ್ದಿರಲೇ ಇಲ್ಲ. ಅಥವಾ ನಾನು ಗಮನಿಸಿಯೇ ಇರಲಿಲ್ಲ. ಈಗ ನನ್ನ ಕಣ್ಮುಂದೆಯೇ ನಿಂತಿತ್ತು - ಆ ಕಲ್ಬೆಂಚು. ನಿಟ್ಟುಸಿರು ಬಿಡುತ್ತ ಅದರ ಮುಂದೆ ನಿಂತೆ. ಸಧ್ಯದಲ್ಲೇ ಬಣ್ಣ ಬಳಿದಿರಬೇಕು. ಬಿಸಿಲಿಗೆ ಹೊಳೆಯುತ್ತಿತ್ತು. ಎಡಬದಿಯಲ್ಲಿನ ಆನೆಯ ಕೆತ್ತನೆ; ಬಲಬದಿಯಲ್ಲಿನ ಸಿಂಹದ ಕೆತ್ತನೆ ಈಗಲೂ ಜೀವಂತವಾಗಿತ್ತು. ಒರಗುವ ಕಲ್ಲಿಗೆ ಎಲೆಗಳ ಕೆತ್ತನೆ. ಸುಮಾರು ನೂರು ವರ್ಷಗಳ ನಂತರವೂ ಕಲ್ಬೆಂಚಿನ ಕಾಲುಗಳು ಬಲಿಷ್ಠವಾಗಿದ್ದವು. ಮಧ್ಯಾಹ್ನದ ಬಿಸಿಲಿನ ತಾಪದೊಂದಿಗೆ ಹುದುಗಿದ್ದ ನೆನಪುಗಳ ಒತ್ತಡ ನನ್ನ ಶಕ್ತಿಯನ್ನು ಕಸಿಯುತ್ತಿತು. ಎಷ್ಟೋ ವರ್ಷಗಳ ನಂತರ ಕಲ್ಬೆಂಚಿನ ಮೇಲೆ ಕುಳಿತೆ.
**************************
" ಊಟ ಮಾಡು ಕೃಷ್ಣ" ಅಮ್ಮ ನನ್ನ ಹಿಂದೆ ಅನ್ನದ ಪಾತ್ರೆ ಹಿಡಿದು ಓಡಿಬರುತ್ತಿದ್ದಳು. ಇಡೀ ಬಡಾವಣೆಯಲ್ಲಿದ್ದದ್ದು ಬಹುಶಃ ನಾಲ್ಕು ಮನೆ. ಮನೆ ಮುಂದೆ ದೊಡ್ಡ ಮೈದಾನ. ಮೈದಾನದ ಒಂದು ಬದಿಯಲ್ಲಿ ಕಲ್ಬೆಂಚು. ಅದರ ಮೇಲಿನ ಆನೆ ಸಿಂಹಗಳ ಕೆತ್ತನೆಯೆಂದರೆ ಏನೋ ಒಂದು ರೀತಿಯ ಆಕರ್ಷಣೆ. ನಿಜವಾದ ಆನೆ ಸಿಂಹ ನೋಡಿರಲಿಲ್ಲ. ಮನೆಯಲ್ಲಿದ್ದ ಮರದ ಬೊಂಬೆಗಳೊಂದಿಗೆ ಆಟವಾಡಿ ಬೇಸರವಾಗಿತ್ತು. ನಾಲ್ಕು ವರ್ಷದ ನನಗೆ ಮನೆಯಿಂದ ಕಲ್ಬೆಂಚಿನವರೆಗು ಓಡುವುದೇ ಒಂದು ಆಟವಾಗಿತ್ತು. ಅದರ ಮೇಲೆ ಹತ್ತಿ ಮೈದಾನದಲ್ಲಿ ಆಗತಾನೇ ನೆಟ್ಟಿದ್ದ ಸ್ವತಂತ್ರ ಭಾರತದ ಬಾವುಟ ನೋಡುವುದು ಮತ್ತೊಂದು ಖುಷಿ. ಊಹೂ...ನಾಲ್ಕು ವರ್ಷದ ನನಗೆ ಸ್ವಾತಂತ್ರದ ಪರಿಕಲ್ಪನೆಯಿತ್ತೆಂದಲ್ಲ. ಊಟ ಮಾಡಿಸುತ್ತ ಅಮ್ಮ ಬಾವುಟದಲ್ಲಿನ ಬಣ್ಣಗಳ ಹೆಸರು ಹೇಳಿಕೊಡುತಿದ್ದಳು. "ಕೇಸರಿ, ಬಿಳಿ, ಹಸಿರು" ಮನದಟ್ಟಾಗುವುದರಲ್ಲಿ ಹುಳಿಯನ್ನ ಮುಗಿದು ಮೊಸರನ್ನ ನಡೆಯುತ್ತಿತ್ತು. ಆ ವೇಳೆಗೆ ಸರಿಯಾಗಿ ಎಲ್ಲಿಂದಲೋ ಬರುತ್ತಿದ್ದ ಕಾಗೆ. ಆ ವಯಸ್ಸಿನಲ್ಲೂ ಊಟದ ಕಡೆಯ ತುತ್ತು ಅದಕ್ಕೆ ಕೊಡಬೇಕೆಂದು ಹಠ ಹಿಡಿಯುತ್ತಿದ್ದೆ. ನನ್ನ ಹಠ ತಾಳಲಾರದೆ ಅಮ್ಮ ಕಡೆಯ ತುತ್ತು ಕಾಗೆಗೆ ಹಾಕುತ್ತಿದ್ದಳು. "ಬಳಿದು ಭಾಗ್ಯವಂತನಾಗು" ಎಂದು ಅಮ್ಮ ಯಾರಿಗೆ ಹೇಳುತ್ತಿದ್ದಳು ಎಂದು ನೆನಪಾಗುತ್ತಿಲ್ಲ. ಆ ಭಾಗ್ಯ...ಆ ಕಾಗೆಯದ್ದೇ ತಾನೇ?
****************************
"ಸಾ...ಧಿಂ..ಚನೇ ..." ಎಂದು ಕಲ್ಬೆಂಚಿನ ಮೇಲೆ ಕುಳಿತು ಸಂಗೀತಾಭ್ಯಾಸ ಮಾಡುತ್ತಿದೆ. ವಯಸ್ಸು ಹದಿನೇಳಿರಬೇಕು. ಸುಮಾರು ಹತ್ತು ವರ್ಷಗಳಿಂದ ನರಸಿಂಹ ಶಾಸ್ತ್ರಿಗಳ ಬಳಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದೆ. ಅಟ್ಟತಾಳ ವರ್ಣಗಳನ್ನು ಒಂದು ಸ್ವರವು ಮರೆಯದಂತೆ ಒಪ್ಪಿಸಿದ ಮೇಲೆ ಶಾಸ್ತ್ರಿಗಳು ಪಂಚರತ್ನ ಕೃತಿಗಳ ಪಾಠ ಶುರು ಮಾಡಿದ್ದು.
ಮೇಘ "ಸಾಧಿಂಚನೆ.." ಕಲಿಯಲು ಶುರುಮಾಡುವುದರೊಳಗೆ ನಾನು ಅದೇ ಹಂತ ತಲುಪಬೇಕು ಎಂದು ಮೂರು ತಿಂಗಳ ಕಾಲ ಶ್ರಮ ಪಟ್ಟಿದ್ದೆ. ಅವಳೊಂದಿಗೆ ಮಾತಾಡುವಷ್ಟು ಧೈರ್ಯ ಇರಲಿಲ್ಲ. ಅವಳ ಸಮಕ್ಕೆ ಪಾಠ ಕಲಿತರೆ ಅವಳು ಹಾಡುವ ಪಾಠಕ್ಕೆ ನಾನೂ ದನಿಗೂಡಿಸಬಹುದು- ಎಂಬ ಸಣ್ಣದಾದ ದೊಡ್ಡ ಆಸೆ. ಹಾಡಿನ ಜೊತೆ ದನಿಗೂಡಿಸುತ್ತ, ನಂತರ ಸಣ್ಣದಾಗಿ ನಕ್ಕು, ಹೆಸರು ಗೊತ್ತಿದ್ದರೂ ಪರಿಚಯ ಮಾಡಿಕೊಂಡು, ಸಂಗೀತದ ಬಗೆಗಿನ ಸಂದೇಹಗಳನ್ನು ಕೇಳುತ್ತ ಸಲುಗೆ ಬೆಳೆಸಿ....ಸರ್ಕಾರದ ಪಂಚವಾರ್ಷಿಕ ಯೋಜನೆಗಳಷ್ಟೇ ಮಹತ್ತರವಾಗಿತ್ತು ನನ್ನ ಯೋಜನೆ ಕೂಡ.
ಕಲ್ಬೆಂಚು ಈಗ ಮೈದಾನದಲ್ಲಿರಲಿಲ್ಲ. ಮೈದಾನದ ಸುತ್ತ ಬಡಾವಣೆ ದೊಡ್ಡದಾಗಿತ್ತು. ಮೈದಾನದ ಒಳಗಿನಿಂದ ರಸ್ತೆಗಳನ್ನು ಕೊರೆದಿದ್ದರು. ಯಾರೋ ಪುಣ್ಯಾತ್ಮ engineer ಕಲ್ಬೆಂಚಿನ ಹತ್ತಿರ ರಸ್ತೆ ಸಾಗದಂತೆ ನೋಡಿಕೊಂಡಿದ್ದ. ಕಲ್ಬೆಂಚು ಇನ್ನು ಜೀವಂತವಾಗಿತ್ತು.
ಮೇಘ ಸಂಗೀತ ಪಾಠ ಮುಗಿಸಿ ಮನೆಗೆ ಹೋಗುವಾಗ ಕಲ್ಬೆಂಚನ್ನು ಹಾದುಹೋಗಬೇಕೆಂಬುದು ನನಗೆ ತಿಳಿದಿತ್ತು. ಪ್ರತಿ ಗುರುವಾರ ಅವಳು ಬರುವ ಅಂದಾಜು ಹೊತ್ತಿಗೆ ಅಲ್ಲೇ ಕೂತು ಅಭ್ಯಾಸ ಮಾಡುತ್ತಿದ್ದೆ. ಅವಳು ದೂರದಲ್ಲಿ ಬರುತ್ತಿದ್ದಾಗ ಇನ್ನು ಪಕ್ವವಾಗಬೇಕಿದ್ದ ಸಂಗೀತ ಏರು ಪೇರಾಗುತ್ತಿದ್ದುದೇ ಹೆಚ್ಚು. ಆದರೂ ಮನಸ್ಸು "ನನ್ನ ತಪ್ಪನ್ನು ಸರಿ ಮಾಡಲಾದರೂ ಆಕೆ ಒಂದು ಕ್ಷಣ ನಿಲ್ಲಬಾರದೇ" ಎಂದು ಚಡಪಡಿಸುತ್ತಿತ್ತು.
ಆ ದಿನ ಅವಳಿಗೆ ಏನನ್ನಿಸಿತೋ. ನನಗಂತೂ ಯಾವ ತಪ್ಪು ಮಾಡಿದ ನೆನಪಿಲ್ಲ. ನಾನು ಕಣ್ಮುಚ್ಚಿ ಮೈಮರೆತು ಹಾಡುವಾಗ ನನ್ನ ದನಿಯ ಜೊತೆ ಆಕೆಯ ದನಿಯೂ ಸೇರಿತು. ನರಸಿಂಹ ಶಾಸ್ತ್ರಿಗಳ ಮನೆಯಲ್ಲಿ ಮಾತ್ರ ಆಕೆಯ ದನಿಯನ್ನು ಕೇಳಿದ್ದೆ, ನಾಲ್ಕು ಗೋಡೆಗಳ ಮಧ್ಯೆ. ತೆರೆದ ಬಯಲಲ್ಲಿ ಆಕೆಯ ಧ್ವನಿ ಮತ್ತೂ ಇಂಪಾಗಿತ್ತು. ಸಣ್ಣದಾಗಿ ನಗುತ್ತ "ಸಾ...ಧಿಂ..ಚನೇ..." ಎಂದು ಮೇಘ ನನ್ನೊಂದಿಗೆ ಹಾಡುತ್ತಿದ್ದಳು! ಅವಳನ್ನೇ ನೋಡುತ್ತಿದ್ದ ನಾನು ಪಲ್ಲವಿಯ ನಂತರ ಹಾಡು ನಿಲ್ಲಿಸಲೇಬೇಕಾಯಿತು. ಹಾಡು ನಿಲ್ಲಿಸಿದ ತಕ್ಷಣ ಮೇಘ ಸಣ್ಣ ಮುಗುಳ್ನಗೆ ನಕ್ಕು ಅಲ್ಲಿಂದ ನಡೆದು ಹೋದಳು. ಬಹುಶಃ ಹಾಡು ನಿಲ್ಲಿಸದಿದ್ದರೆ.....ಇನ್ನು ಸ್ವಲ್ಪ ಹೊತ್ತು ನಿಲ್ಲುತ್ತಿದ್ದಳೇನೋ?
*****************************
ಅಪ್ಪ-ನಾನು ಒಟ್ಟಾಗಿ ಆ ಕಲ್ಬೆಂಚಿನ ಮೇಲೆ ಕುಳಿತು ಮೂವತ್ತು ವರ್ಷಗಳಾಗಿದ್ದವು. ಮಿಡ್ಲ್ ಸ್ಕೂಲ್ನಲ್ಲಿ ಅಮ್ಮ ನನ್ನ ತಮ್ಮನನ್ನು ಸಂಭಾಳಿಸುತ್ತಿದ್ದಾಗ ನನ್ನ ಓದಿಗೆ ತೊಂದರೆಯಾಗಬಾರದೆಂದು ಕಲ್ಬೆಂಚಿನ ಮೇಲೆ ಬೀದಿ ದೀಪದ ಬೆಳಕಿನಲ್ಲಿ ಅಪ್ಪನ ಮನೆಪಾಠ. English, ಗಣಿತ, ಕನ್ನಡ ಎಲ್ಲವು. ಹದಿಮೂರರ ಮಗ್ಗಿ ಮರೆತು ಏಟು ತಿಂದದ್ದು ಅಲ್ಲೇ. ಬಂಗಾಳದ ರಾಜಧಾನಿ ನೆನಪಾಗದೆ ಭಯದಿಂದ ಬೆಂಚಿನಿಂದ ಬಿದ್ದು ಮಂಡಿ ಗಾಯವಾದದ್ದೂ ಅಲ್ಲೇ.
ಮೂವತ್ತು ವರ್ಷಗಳ ನಂತರ "ಬಾ...ಆ ಬೆಂಚಿನ ಮೇಲೆ ಸ್ವಲ್ಪ ಕೂತು ಬರೋಣ" ಎಂದು ಅಪ್ಪ ಕರೆದರು. He was clearly feeling nostalgic that evening. ಆ ವೇಳೆಗೆ ಬಡಾವಣೆ ಮತ್ತೂ ಬೆಳೆದಿತ್ತು. ಕಲ್ಬೆಂಚು ಈಗ ಫುಟ್ಪಾತ್ ಮೇಲೆ. ಯಾರೋ ಕಳೆದ ವರ್ಷ ಬಣ್ಣ ಬಳಿದಿದ್ದರು. ಆನೆ ಸಿಂಹಗಳ ಕೆತ್ತನೆ ಕಂಡಾಗ ಬಾಲ್ಯದ ನೆನಪುಗಳು ಮರುಕಳಿಸಿದವು.
ಇಬ್ಬರೂ ಕಲ್ಬೆಂಚಿನ ಮೇಲೆ ಕೂತೆವು. ನಾನು ಕೆಲಸ ಮಾಡುತ್ತಿದುದು ಬಾಂಬೆಯಲ್ಲಿ. ವೈಶಾಲಿಯನ್ನು ಮದುವೆಯಾಗಿ ಕಿಶೋರ ಹುಟ್ಟಿದ್ದ. ಅಪ್ಪ-ಅಮ್ಮ ಇಲ್ಲಿ ಅಕ್ಷಯ್ ಜೊತೆ. ತಿಂಗಳಿಗೆರಡು ಪತ್ರ. ಒಂದು ಟ್ರಂಕ್ ಕಾಲ್. ಆರು ತಿಂಗಳಿಗೊಮ್ಮೆ ಹತ್ತು ದಿನದ ಭೇಟಿ. ಸಹಜವಾಗಿ ನನಗೂ ಅಪ್ಪ ಅಮ್ಮನಿಗೂ ಸ್ವಲ್ಪ ಅಂತರ ಬೆಳೆದಿತ್ತು.
"ಕಿಶೋರ ಚೂಟಿಯಾಗಿದಾನೆ...Smart Boy " ಎಂದರು ಅಪ್ಪ.
"ಹೌದಪ್ಪ...ಐದು ವರ್ಷದ ಮಟ್ಟಿಗೆ ಅವನು ಬುದ್ಧಿವಂತ" ಎಂದೆ. ಸ್ವಲ್ಪ ಹೊತ್ತು ಇಬ್ಬರು ಮೌನವಾಗಿ ಕುಳಿತಿದ್ದೆವು.
"ಬಾಂಬೆಯಲ್ಲಿ ಹಣಕ್ಕೇನು ತೊಂದರೆ ಇಲ್ಲ ತಾನೇ?" ಅಪ್ಪ ಕೇಳಿದರು. ಸ್ವಲ್ಪ ಸ್ವಾಭಿಮಾನಿಯಾದ ನನಗೆ, ಇಂತಹ ಪ್ರಶ್ನೆಗಳೆಂದರೆ ಮುಜುಗರ. ಆದರೂ, ಅದು ಅಪ್ಪನ ಕಾಳಜಿಯಿಂದ ಮೂಡಿದ ಪ್ರಶ್ನೆ.
"ಬಾಡಿಗೆ ಸ್ವಲ್ಪ ಜಾಸ್ತಿ. ಈ ವರ್ಷದ ಕೊನೆಯಲ್ಲಿ Promotion ಬಂದ್ರೆ.. ಅವನ ಸ್ಕೂಲ್ ಖರ್ಚು ಕಳೆಯುತ್ತೆ. " ಎಂದೆ.
"Very Good" ಮತ್ತೆ ಮೌನ. ಕೆಲಹೊತ್ತಿನ ನಂತರ ಅವರೇ "ಅಲ್ಲಿ ಸಮಯ ಹೇಗೆ ಕಳೀತೀರ?" ಕೇಳಿದರು.
"ಅಲ್ಲೇನು.. ಸೋಮವಾರದಿಂದ ಶುಕ್ರವಾರದವರೆಗೆ ಕತ್ತೆ ಥರ ದುಡಿಯೋದು. ಶನಿವಾರ ವೈಶಾಲಿಗೆ ಸಹಾಯ. ಭಾನುವಾರ.... I am Kishore's Father....ಅವನು ಹೇಳಿದ ಹಾಗೆ ಕುಣಿಬೇಕು. ಆರು ತಿಂಗಳು ಕಳೆಯೋದೆ ಗೊತ್ತಾಗೊಲ್ಲ.." ಎಂದು ಸಣ್ಣದಾಗಿ ನಗುತ್ತ ಹೇಳಿದೆ.
"ಹೂ.. ಭಲೆ" ಅಪ್ಪ ತಲೆದೂಗಿದರು. ಮತ್ತೆ ಮೌನ. ಬೀದಿ ದೀಪದ ಬೆಳಕಿನಲ್ಲಿ ಅವರ ಮನಸ್ಸಿನ ಚಡಪಡಿಕೆ ಅವರ ಮುಖದ ಮೇಲೆ ಹಾದುಹೋಗುತ್ತಿದ್ದುದನ್ನು ಗಮನಿಸಿದೆ.
ನಮ್ಮಿಬ್ಬರ ನಡುವೆ ಆಳವಾದ ಸಂಭಾಷಣೆ, ಮಾತುಕತೆಗಳು ಬಹಳ ಕಡಿಮೆ. ಅಮ್ಮನ ಬಳಿ ಸಲೀಸಾಗಿ ಎಲ್ಲವನ್ನು ಮಾತನಾಡುತ್ತಿದ್ದ ನಾನು ಅಪ್ಪನ ಬಳಿ ವಿಷಯಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಅವರು ಅಷ್ಟೇ, ನನ್ನೊಂದಿಗೆ ತಮಾಷೆಯೇ ಹೆಚ್ಚು - ಚಿಕ್ಕಂದಿನಿಂದಲೂ. ಇಂದು ಏನೋ ಮುಖ್ಯವಾದ ವಿಷಯ ಹೇಳಲು/ಕೇಳಲು ತವಕಿಸುತ್ತಿದ್ದಾರೆ.
"ಕೃಷ್ಣ...ನೀನು, ವೈಶಾಲಿ, ಕಿಶೋರ..ಎಲ್ಲ ಇಲ್ಲೇ ಬಂದು ಯಾಕಿರಬಾರದು?" ಎಂದು ಅಪ್ಪ ಆಸೆ ಅಸಹಾಯಕತೆ ಬೆರೆತ ಧ್ವನಿಯಲ್ಲಿ ಕೇಳಿದರು. ಆ ಕ್ಷಣದಲ್ಲಿ ಅವರ ವಯಸ್ಸು ಎದ್ದು ಕಾಣುತಿತ್ತು. ತಲೆಯಲ್ಲಿ ಈಗ ಹೇರಳವಾದ ಬಿಳಿ ಕೂದಲು. ಅಲ್ಲಲ್ಲಿ ಒಳ ಹೋಗಿದ್ದ ಕೆನ್ನೆ, ಕ್ಷೀಣಿಸಿದ್ದ ಕಣ್ಣುಗಳಲ್ಲಿನ ಚೈತನ್ಯ - ಎಲ್ಲವನ್ನು ಗಮನಿಸಿದೆ.
ಆದರೂ ಮತ್ತೊಂದೆಡೆ ಕೆಲಸದ ಒತ್ತಡ. ಮಹತ್ವಾಕಾಂಕ್ಷೆ. ಆರು ವರ್ಷ ಬಾಂಬೆಯಲ್ಲಿ ಕೆಲಸ ಮಾಡಿದರೆ ಉನ್ನತ ಹುದ್ದೆ ತಲುಪುವ ಅವಕಾಶ. ಅಪ್ಪ, ಅಮ್ಮ, ವೈಶಾಲಿ ಎಲ್ಲರಿಗೂ ಹೆಮ್ಮೆ. ಕಿಶೋರನಿಗೆ ಒಳ್ಳೆಯ ಭವಿಷ್ಯ. ಅಪ್ಪ ಅಮ್ಮನನ್ನು ನೋಡಲು ಆರು ತಿಂಗಳ ಬದಲು ಮೂರು ತಿಂಗಳಿಗೊಮ್ಮೆ ಬಂದರಾಯಿತು. ವಾರಕ್ಕೊಂದು ಟ್ರಂಕ್ ಕಾಲ್ ಮಾಡಿದರಾಯಿತು.
ಇವೆಲ್ಲ ಸಮಜಾಯಿಷಿ ನೀಡಿ ಅಪ್ಪನ ಆಸೆಯನ್ನು ಕೆಲ ವರ್ಷಗಳ ಕಾಲ ಮುಂದೂಡಿಸಿದೆ. ರಜೆ ಮುಗಿಸಿ ಬಾಂಬೆ ತಲುಪಿದೆ. ಮಾತಿನಂತೆ ವಾರಕ್ಕೊಂದು ಟ್ರಂಕ್ ಕಾಲ್ ಶುರುವಾಯಿತು. ಎರಡು ಟ್ರಂಕ್ ಕಾಲ್ ಮಾಡಿದೆ. ಮೂರನೇ ಟ್ರಂಕ್ ಕಾಲ್ ಅವಶ್ಯಕತೆ ಇರಲಿಲ್ಲ.
********************************
"ಕಿಶೋರ-ಶ್ರುತಿ ಹೊರಡ್ತಾಇದಾರೆ ಕಣೋ " ರಸ್ತೆಯ ಆ ಬದಿಯಿಂದ ಕೂಗಿದ ಅಕ್ಷಯ್. ವೈಶಾಲಿ ನಾನು ಕಲ್ಬೆಂಚಿನ ಮೇಲೆ ಕೂತಿದ್ದೆವು. ಘಂಟೆ ರಾತ್ರಿ ಒಂಭತ್ತು ಮೀರಿತ್ತು.
"ಟ್ಯಾಕ್ಸಿ ಬಂತು ಅನಿಸುತ್ತೆ. ಬನ್ನಿ, ಅವರಿಬ್ರನ್ನ ಕಳಿಸೋಣ" ಎಂದಳು ವೈಶಾಲಿ, ಅಪೇಕ್ಷೆಯಿಂದ. ನನ್ನ ಕೋಪ ತಣ್ಣಗಾಗಿರಲಿಲ್ಲ.
"ಅವನಿಗೆ ನನ್ನ ಆಶೀರ್ವಾದದ ಅವಶ್ಯಕತೆ ಇದ್ದ ಹಾಗಿಲ್ಲ. ಕ್ರಿಶ್ಚಿಯನ್ನ ಮದುವೆಯಾದ ಮೇಲೆ...."ಮುಂದೆ ಏನೂ ಮಾತಾಡಲು ತೋಚಲಿಲ್ಲ.
ಒಂದು ವಾರದ ಹಿಂದೆ ನಾನೇ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದು ನಿಜ. ಅವನ ಪ್ರೀತಿಗೆ, ಮದುವೆಗೆ, ವೈಶಾಲಿ, ಅಕ್ಷಯ್ನ ಕುಟುಂಬ ಎಲ್ಲರೂ ಬೆಂಬಲ ನೀಡಿದ್ದರಿಂದ ನನಗೆ ಬೇರೆ ವಿಧಿಯಿರಲಿಲ್ಲ. ಆದರೆ ಅದರೊಂದಿಗೆ ರಾಜಿಯಾಗುವ ಮನಸ್ಥಿತಿ ನನಗಿನ್ನೂ ಬಂದಿರಲಿಲ್ಲ.
"ಅವಳಿಗೇನು ಕಡಿಮೆಯಾಗಿದೆ..? ಲಕ್ಷಣವಾಗಿದ್ದಾಳೆ. ಅಮ್ಮ ಹಿಂದು. ಅಪ್ಪ ಕ್ರಿಶ್ಚಿಯನ್. ತಪ್ಪೇನು? ನಮ್ಮ ಸಂಸ್ಕಾರವು ಅವಳಿಗೆ ಸ್ವಲ್ಪ ಬರುತ್ತೆ. ಕ್ರಮೇಣವಾಗಿ ಹೇಳಿಕೊಟ್ರಾಯಿತು." ಎಂದು ವೈಶಾಲಿ ನಿಧಾನವಾಗಿ ತಿಳಿ ಹೇಳಿದಳು. ಈ ವಿಷಯದಲ್ಲಿ ಅವಳು ಹೊಂದಿಕೊಂಡ ರೀತಿ, ವೇಗ ಎರಡೂ ಆಶ್ಚರ್ಯಕರವಾಗಿತ್ತು. ಒಬ್ಬನೇ ಮಗನ ಮದುವೆಯ ಸಂಭ್ರಮದಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದಳು. ಆ ವಿಷಯದಲ್ಲಿ ನಾನು ಹಿಂದೆ ಉಳಿದೆ ಎಂಬ ನಾಚಿಕೆ ನನ್ನದಾಗಿತ್ತು.
"ಆದರೆ...ಆದರೆ..ಮದುವೆಗೆ ಮುಂಚೆ ಪ್ರೀತಿ ಮಾಡುವ ಅವಶ್ಯಕತೆ ಏನಿತ್ತು ಅವನಿಗೆ..?" ಎಂದು ವಾದಿಸಿದೆ.
"ಆಹಾ..ಇದೆಂಥ ವಾದ ನಿಮ್ಮದು? ನೀವು ಹದಿನೇಳನೆ ವಯಸ್ಸಿನಲ್ಲೇ ಮೇಘ ಅನ್ನೋಳನ್ನ ಪ್ರೀತಿಸಿದ್ದು?" ಎಂದು ವೈಶಾಲಿ ಮರುಪ್ರಶ್ನೆ ಮಾಡಿದಳು. ಅವಳ ತುಟಿಯಂಚಿನಲ್ಲಿ ಮೂದಲಿಸುವ ತುಂಟ ನಗು. ಮೂವತ್ತು ವರ್ಷ ಒಟ್ಟಾಗಿ ಕಳೆದಿದ್ದ ನಮ್ಮ ಮಧ್ಯೆ ಯಾವ ರಹಸ್ಯವೂ ಇರಲಿಲ್ಲ. ಮೇಘಾಳ ಬಗ್ಗೆ ನಾನೇ ಎಷ್ಟೋ ಬಾರಿ ಆಕೆಗೆ ಹೇಳಿದ್ದೆ. ಅವಳ ನಗುವನ್ನು ಕಂಡು ಮನಸ್ಸು ಎಷ್ಟೋ ಹಗುರವಾಯಿತು. ಆದರೂ ಕೋಪವನ್ನು ಬಿಟ್ಟುಕೊಡಬಾರದೆಂಬ ಹಠ.
ಮತ್ತೊಂದು ವಾದ ಹುಡುಕುವುದರೊಳಗೆ ಟ್ಯಾಕ್ಸಿಯೊಂದು ಕಲ್ಬೆಂಚಿನ ಬಳಿ ಬಂದು ನಿಂತಿತು. ಕಿಶೋರ ಶ್ರುತಿ ಕಾರಿನಿಂದ ಇಳಿದರು. ಇಬ್ಬರ ಮುಖದಲ್ಲು ಹೊಸ ಜೀವನದ ಉತ್ಸಾಹ.
"You know Shruthi...ಈ ಕಲ್ಬೆಂಚು ಹೆಚ್ಚು ಕಡಿಮೆ ನಮ್ಮ ಕುಟುಂಬದ ಆಸ್ತಿ. It's almost family heirloom. ನಾವೆಲ್ಲರು ಮನೆಯಲ್ಲಿ ಬೆಳೆಯೋದ್ರ ಜೊತೆ ಇಲ್ಲೂ ಬೆಳೆದ್ವಿ" ಎಂದು ಕಿಶೋರ ಕಲ್ಬೆಂಚನ್ನು ಶ್ರುತಿಗೆ ಪರಿಚಯ ಮಾಡಿಕೊಟ್ಟ.
"ಅಪ್ಪ ಅಮ್ಮ ನೀವು ಇಲ್ಲೇ ಇದ್ದದ್ದು ಒಳ್ಳೇದೇ ಆಯಿತು. ಫ್ಲೈಟ್ಗೆ ಹೊತ್ತಾಯಿತು. ಆಶೀರ್ವಾದ ಮಾಡಿ" ಎಂದು ಇಬ್ಬರೂ ನಮಗೆ ನಮಸ್ಕರಿಸಿದರು. ತುಂಬು ಮನಿಸ್ಸಿನಿಂದಲೇ ಹಾರೈಸಿದರೂ ನಾನು ಅದನ್ನು ತೋರಿಸಿಕೊಳ್ಳಲಿಲ್ಲ. "ಒಳ್ಳೇದಾಗ್ಲಿ.." ಎಂದೆ. ವೈಶಾಲಿ ಶ್ರುತಿಯನ್ನು ತಬ್ಬಿ ಬೀಳ್ಕೊಟ್ಟಳು. ಇಬ್ಬರೂ ಟ್ಯಾಕ್ಸಿಯಲ್ಲಿ ಕುಳಿತರು. ನಾನು ತಡೆಯಲಾರದೆ "ಆಗಾಗ ಫೋನ್ ಮಾಡು ಕಿಶೋರ್" ಎಂದೆ. ವೈಶಾಲಿ ನನ್ನನೇ ನೋಡುತ್ತಿರುವುದು ನನಗೆ ಗೊತ್ತಿತ್ತು. ಟ್ಯಾಕ್ಸಿ ಹೊರಟು ಕಣ್ಮರೆಯಾಯಿತು. ನಾನು ವೈಶಾಲಿ ಮತ್ತೆ ಕಲ್ಬೆಂಚಿನ ಮೇಲೆ ಕುಳಿತೆವು.
"ಸಾ...ಧಿಂ..ಚನೇ ..." ಎಂದು ವೈಶಾಲಿ ತುಂಟತನದಿಂದ ಗುನುಗಿದಳು. ನಾನೂ ನನ್ನ ದನಿ ಸೇರಿಸಿದೆ...
*********************************
ಕಿಶೋರನ ಮದುವೆಯಾದ ಮೂರು ವರ್ಷಕ್ಕೆ ವೈಶಾಲಿ ಕೊನೆಯುಸಿರೆಳೆದಳು. ಸಹಜವಾದ ಜ್ವರಕ್ಕೆ ಆಸ್ಪತ್ರೆ ಸೇರಿದ ಅವಳ ಆರೋಗ್ಯ ವಿಚಿತ್ರವಾಗಿ ಕುಸಿದು ಹದಿನೈದು ದಿನದಲ್ಲಿ ಎಲ್ಲವು ಮುಗಿದುಹೋಯಿತು. ಲಂಡನ್ನಲ್ಲಿದ್ದ ಕಿಶೋರ್ ಬರುವುದರೊಳಗೆ ಅವಳ ದೇಹವನ್ನು ಸುಟ್ಟಾಗಿತ್ತು. "ಕಿಶೋರ್ ಬರ್ತಿದಾನೆ ತಾನೇ?"ಎಂದು ಕೇಳಿ ಕಣ್ಮುಚ್ಚಿದ್ದ ವೈಶಾಲಿ ಕಣ್ಣು ತೆರೆಯಲೇ ಇಲ್ಲ.
ಆಗ ಕಿಶೋರನಿಗು ನನಗು ಹೆಚ್ಚು ಮಾತಾಗಲೇ ಇಲ್ಲ. ಒಬ್ಬರ ಮೇಲೊಬ್ಬರಿಗೆ ನಿರರ್ಥಕವಾದ ಕೋಪ. ಇನ್ನು ಬೇಗ ಹೇಳಬೇಕಾಗಿತ್ತು ಎಂದು ಅವನು. ಅಷ್ಟು ಕಾಳಜಿಯಿದ್ದರೆ ಇದ್ದು ನೋಡಿಕೊಳ್ಳಬೇಕಾಗಿತ್ತು ಎಂದು ನಾನು. ಅಕ್ಷಯ್ ಸೇತುವೆಯಂತೆ ನಮ್ಮಿಬ್ಬರ ಮಧ್ಯೆ ನಿಂತು ಎಲ್ಲ ಕೆಲಸಗಳಿಗೂ ನೆರವಾದ.
ಮೂರು ವಾರ ಕಳೆದ ಮೇಲೆ ಕಿಶೋರ್ ಶ್ರುತಿ ಲಂಡನ್ನಿಗೆ ವಾಪಸ್ಸಾದರು. ಇನ್ನಾರು ತಿಂಗಳಲ್ಲಿ ಮಗುವೊಂದನ್ನು ನಿರೀಕ್ಷಿಸುತ್ತಿರುವ ಸುದ್ದಿಯನ್ನು ಹೊರಡುವಾಗ ಕಿಶೋರ್ ಹೇಳಿದ. ಲಂಡನ್ನಿನಲ್ಲಿ ಕೆಲಕಾಲ ಬಂದಿರಲು ಒತ್ತಾಯ ಮಾಡಿದ.
**********************************
ಮಧ್ಯಾಹ್ನದ ಬಿಸಿಲು ಕಡಿಮೆಯಾಗಿ ಸಂಜೆಯೆಡೆಗೆ ತಿರುಗುತ್ತಿತ್ತು. ಟ್ರಾಫಿಕ್ ಗಿಜಿಗಿಜಿ ಮತ್ತೆ ಕೇಳಲು ಶುರುವಾಯಿತು. ಮತ್ತದೇ ಎಂಭತ್ತರ ಮೈಭಾರ. ಆದರೆ ಯಾವುದೋ ಲೋಕ ವಿಹರಿಸಿ ಬಂದಷ್ಟು ಹಗುರವಾಗಿತ್ತು ಮನಸ್ಸು. ಏನೋ ನೆಮ್ಮದಿ.
ದೂರದಲ್ಲಿ ರಂಗಪ್ಪ ನಡೆದು ಬರುತ್ತಿದ್ದ. ಮುಖದಲ್ಲಿ ಗಾಬರಿ. ಕಲ್ಬೆಂಚಿನ ಬಳಿ ಬಂದವನೆ
"ಮನೆಗೆ ಹೋದ್ರೆ ಬೀಗ ಹಾಕಿತ್ತು. ಹುಡುಕಿ ಹುಡುಕಿ ಸಾಕಾಯಿತು. ಸಧ್ಯ ಸಿಕ್ಕಿದ್ರಲ್ಲ. ನಡೀರಿ." ಎಂದು ಒಂದು ಕೈಯಲ್ಲಿ ನನ್ನನ್ನು ಹಿಡಿದೆಬ್ಬಿಸಿ ಮತ್ತೊಂದರಲ್ಲಿ ಔಷಧಿಯ ಪ್ಯಾಕೇಜ್ ತೆಗೆದುಕೊಂಡ.
ಮತ್ತೆ ರಸ್ತೆ ಕ್ರಾಸ್ ಮಾಡಬೇಕಿತ್ತು. ರಂಗಪ್ಪನೇ ಕೈ ಹಿಡಿದು ದಾಟಿಸಿದ. ರಸ್ತೆ ದಾಟುವಾಗ ಅವನ ಮುಖವನ್ನು ನೋಡಿದರೆ ಅಲ್ಲೂ ಕಿಶೋರನ ಮುಖವೇ ಕಂಡಿತು.
ರಸ್ತೆ ದಾಟಿದ್ದಾಯಿತು. "ರಂಗಪ್ಪ....ಇವತ್ತು ಯಾಕೋ ಕಿಶೋರ ಬಹಳ ನೆನಪಾಗ್ತಿದಾನೆ ಕಣಪ್ಪ.. " ಎಂದೆ.
"ಓಹೋ ಅದಕ್ಕೆ ಇರ್ಬೇಕು...ಅವ್ರೆ ಫೋನ್ ಮಾಡಿದ್ರು" ರಂಗಪ್ಪ ಹೇಳಿದ. ನನಗೆ ಆಶ್ಚರ್ಯವಾಯಿತು. ಕಿಶೋರ್ ಸಾಮಾನ್ಯವಾಗಿ ಫೋನ್ ಮಾಡುತ್ತಿದ್ದದ್ದು ಶನಿವಾರ. ಈ ಸರಿ ಬುಧವಾರವೇ ಯಾಕೆ ಫೋನ್ ಮಾಡಿದ್ದ?
"ಏನಂತೆ?" ಕೇಳಿದೆ.
"ಮನೆಗೆ ಫೋನ್ ಮಾಡಿದ್ರಂತೆ. ನಿಮ್ಮ ಮೊಬೈಲಿಗೂ. ಎರಡು ಕಡೆ ಎತ್ತ್ಲಿಲ್ಲ ಅಂತ ಗಾಬರಿ ಇಂದ ನನಗೆ ಫೋನ್ ಮಾಡಿದ್ರು."
ನಾನು ಮೊಬೈಲ್ ಮನೆಯಲ್ಲೇ ಮರೆತು ಬಂದಿದ್ದೆ. "ಸರಿ... ಏನಂತೆ?" ಮತ್ತೆ ಕೇಳಿದೆ. ಅವತ್ತೇನೋ ಮಗನ ಬಗ್ಗೆ ವ್ಯಾಮೋಹ ಹೆಚ್ಚೇ ಇತ್ತು.
"ಬರ್ತಿದ್ದಾರಂತೆ...ಈ ಶನಿವಾರ. ಒಂದು ತಿಂಗಳ ರಜೆಗೆ. ಸಧ್ಯ..ನನಗೆ ನಿಮ್ಮಿಂದ ಸ್ವಲ್ಪ ದಿನ ಬಿಡುಗಡೆ" ನಗುತ್ತ ಹೇಳಿದ ರಂಗಪ್ಪ.
ಎಂಥ ಒಳ್ಳೆ ಸುದ್ದಿ! ಮಗ ಎರಡು ವರ್ಷದ ನಂತರ ಬರುತ್ತಿದ್ದಾನೆ. ಮೊಮ್ಮಗಳು ಧ್ವನಿಗೆ ಈಗ ಆರೇಳು ವರ್ಷ ವಯಸ್ಸಿರಬೇಕು. ಅವಳನ್ನು ಕಲ್ಬೆಂಚಿಗೆ ಕರೆತಂದು ಕೂರಿಸಿ ಕತೆ ಹೇಳಬಹುದು.
" ರಂಗಪ್ಪ... ಮೊಮ್ಮಗಳನ್ನ ಕಲ್ಬೆಂಚಿನ ಮೇಲೆ ಕೂರಿಸಿಕೊಂಡು ಕತೆ ಹೇಳಬೇಕು.. ಪ್ರತಿ ಸಂಜೆ ನನ್ನನ್ನ ಕರಕೊಂಡು ಬರಕ್ಕಾಗುತ್ತ?" ಆಸೆಯಿಂದ ಕೇಳಿದೆ. ಯಾವ ಕತೆಗಳು ಅವಳಿಗೆ ಇಷ್ಟವಾಗಬಹುದು ಎಂದು ಆಗಲೇ ಮನಸ್ಸಿ ನ್ನಲ್ಲಿ ಪಟ್ಟಿ ಮಾಡಲು ಶುರುಮಾಡಿದೆ.
"ಆ ಮಗು ನಿಮ್ಮ ಜೊತೆ ಇಲ್ಲಿವರೆಗು ಬಂದು.. ನಿಮ್ಮ ಹಳೆ ಕತೆಗಳನ್ನು ಕೇಳಿದಳು...ಅದಾಯಿತು...."ಎಂಬ ರಂಗಪ್ಪನ ವ್ಯಂಗ್ಯ ಕಿವಿಗೆ ಬೀಳಲೇ ಇಲ್ಲ.
- 13th February 2021
Amazing story dear Aloka..God bless you dear
ReplyDeleteThank you Sir! :)
DeleteBrilliantly written Alok! ಈ style of writing ಇದೆಯಲ್ಲ, ಅದು ಬಲು ಚಂದ! ಅದ್ಭುತವಾದ ಕಥೆಗಾರ ನೀನು
ReplyDeleteThank you Vinay!!
Delete