Showing posts with label Kannada. Show all posts
Showing posts with label Kannada. Show all posts

Tuesday, February 15, 2022

ಬೀಳ್ಕೊಡುಗೆ

 ಬೀಳ್ಕೊಡುಗೆ 

"ಅಪ್ಪ ಬಾತ್ ರೂಮಿನಲ್ಲಿ ಕುಸಿದು ಬಿದ್ರು ,ರಾಘವ" ರಮೇಶ ಹೇಳಿದ. ಅವನ ಧ್ವನಿ ಗದ್ಗದಿತವಾಗಿತ್ತು. ಗಾಬರಿ, ಅಸಹಾಯಕತೆಯನ್ನೂ ರಾಘವ ಗಮನಿಸಿದ. ದೂರದ ಜರ್ಮನಿಯಿಂದ ಫೋನ್ನಲ್ಲಿ ಮಾತಾಡುತ್ತಿದ್ದರೂ ಬೆಂಗಳೂರಿನ ತನ್ನ ಮನೆಯಲ್ಲಿ ಏನಾಗುತ್ತಿರಬಹುದೆಂಬ ಚಿತ್ರ ಅವನ ಕಣ್ಮುಂದೆ ಬರುತ್ತಿತ್ತು. 

ರಮೇಶ ತನ್ನನ್ನು ಸಂಭಾಳಿಸಿಕೊಂಡು ಅಮ್ಮನನ್ನು ಸಮಾಧಾನ ಪಡಿಸಬೇಕು. ಯಾವುದೇ ಸಮಯ ವ್ಯರ್ಥ ಮಾಡದೆ ಆಂಬುಲೆನ್ಸ್ ಗೆ  ಕರೆ ಮಾಡಿ ಅಪ್ಪನನ್ನು ಆಸ್ಪತ್ರೆಗೆ ರವಾನೆ ಮಾಡಬೇಕು. ಘಂಟೆ ರಾತ್ರಿ ಹತ್ತಾಗಿತ್ತು. ರಮೇಶನ ಮಗಳು ಸಂಧ್ಯಾಳಿಗೆ ಇನ್ನೂ ಮೂರು ವರ್ಷ. ಈ ಗದ್ದಲವನ್ನೆಲ್ಲ ಕಂಡು ಅಳುತ್ತಿರುತ್ತಾಳೆ. ರಮೇಶನ ಹೆಂಡತಿ ಪುಷ್ಪ ಅಮ್ಮನನ್ನು ಗಮನಿಸುತ್ತಿರುತ್ತಾಳೆ... 

"ರಾಘವ..ಆಂಬುಲೆನ್ಸ್ ಬಂತು... ಈಗ ಆಸ್ಪತ್ರೆಗೆ ಹೋಗ್ತೀನಿ ನಾನು. ಆಮೇಲೆ ಫೋನ್ ಮಾಡ್ತೀನಿ." ದೂರದಲ್ಲೆಲ್ಲೋ ರಮೇಶನ ಧ್ವನಿ. 

"ಸರಿ. ಏನಾದ್ರೂ ಮಾತಾಡೋದಿದ್ರೆ ಫೋನ್ ಮಾಡು" ಎಂದು ರಾಘವ ಫೋನ್ ಇಟ್ಟ. 

ತಮ್ಮ ರಮೇಶನಿಗೆ ತಂದೆ-ತಾಯಿಯರ ಜವಾಬ್ದಾರಿ ವಹಿಸಿ ತಾನು ಜರ್ಮನಿಗೆ ಬಂದದ್ದು ಸರಿಯೋ, ತಪ್ಪೋ ಎಂಬ ದ್ವಂದ್ವ ರಾಘವನನ್ನು ಸದಾ ಕಾಡುತ್ತಲೇ ಇತ್ತು. ಸದ್ಯ, ಅವರ ಆರೋಗ್ಯದಲ್ಲಿ ಯಾವ ವ್ಯತ್ಯಯವು ಆಗದಿದ್ದ ಕಾರಣ ಇವನು ನಿರಾಳವಾಗಿದ್ದ. ಮಡದಿ ಮಾಲತಿ, ಮಗ ವಿಶ್ವಾಸ್ ನ ಜೊತೆ ಖುಷಿಯಾಗಿಯೇ ಕೆಲವು ವರ್ಷಗಳನ್ನು ಕಳೆದಿದ್ದ. ಇನ್ನೊಂದೆರಡು ವರ್ಷ ಇಲ್ಲೇ ಇದ್ದು ನಂತರ ಬೆಂಗಳೂರಿಗೆ ಮರಳಿ, ಅಪ್ಪ ಅಮ್ಮನನ್ನು ತನ್ನ ಜೊತೆಗೆ ಇರಿಸಿಕೊಳ್ಳುವ ಯೋಚನೆ ಅವನದ್ದು. ಆದರೆ ರಮೇಶನ ಫೋನ್ ಕಾಲ್ ಎಲ್ಲವನ್ನು ಬುಡಮೇಲು ಮಾಡಿತ್ತು. 

"ಊಟಕ್ಕೆ ಬಾರಪ್ಪ" ಎಂದು ಐದು ವರ್ಷದ ವಿಶ್ವಾಸ್ ಮುದ್ದಾಗಿ ಕರೆದಾಗ, ಈ ಆಘಾತದಲ್ಲೂ ಒಂದು ಸಣ್ಣ ಚೈತನ್ಯ. ಡೈನಿಂಗ್ ಟೇಬಲ್ ಮುಂದೆ ಕೂತರೂ ರಾಘವನಿಗೆ ಏನು ತಿನ್ನುವ ಮನಸ್ಸಾಗಲಿಲ್ಲ. "ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದಾಗ ಅವನ ಕಣ್ಣಂಚಿನಲ್ಲಿ ಒಂದೆರಡು ಹನಿ ನೀರು. ಎದುರಲ್ಲಿ ಕುಳಿತ್ತಿದ್ದ ಮಾಲತಿ ಬಂದು ಇವನ ಪಕ್ಕದಲ್ಲಿ ಕುಳಿತಳು. 

"ಏನು ಆಗೋದಿಲ್ಲ ರಾಘವ್. ಹೀ ವಿಲ್ ಬಿ ಓಕೆ" ಎಂದು ಸಮಾಧಾನ ನೀಡುವ ಪ್ರಯತ್ನ ಮಾಡಿದಳು. ಏನೂ ಅರಿಯದ ವಿಶ್ವಾಸ್ ತನ್ನ ಕೈ ಬೆರಳುಗಳನ್ನು ಅಪ್ಪನ ಕೈ ಬೆರಳುಗಳೊಂದಿಗೆ ಸೇರಿಸಿದ್ದ. 

                                         ***************************************

ಜರ್ಮನಿಯಲ್ಲಿ ಘಂಟೆ ರಾತ್ರಿ ಹನ್ನೊಂದಾಗಿತ್ತು. ಅಂದರೆ ಬೆಂಗಳೂರಿನಲ್ಲಿ ಎರಡೂವರೆ ಸುಮಾರು.  ರಾಘವ ಫೋನ್ ಪಕ್ಕದಲ್ಲೇ ಕುಳಿತಿದ್ದ. ರಮೇಶ ಆಸ್ಪತ್ರೆ ವಿವರವನ್ನು ವಾಟ್ಸಪ್ಪ್ ಮೂಲಕ ಕಳಿಸಿದ್ದ. ಹೈಟೆಕ್ ಆಸ್ಪತ್ರೆಗೇ ಅಪ್ಪನನ್ನು ಸೇರಿಸಿದ್ದ. 

"ದುಡ್ಡಿನ ಬಗ್ಗೆ ಏನೂ ಯೋಚ್ನೆ ಮಾಡ್ಬೇಡ" ಎಂಬ ರಾಘವನ ಸಂದೇಶವನ್ನು ರಮೇಶ ನೋಡಿದ್ದ. ಆದರೆ ಉತ್ತರಿಸಿರಲಿಲ್ಲ. ರಾಘವನಿಗೆ ಸಣ್ಣ ಅಳುಕು. ಬಹುಶಃ ಇಂಥ ಸಮಯದಲ್ಲಿ ತಾನು ದುಡ್ಡಿನ ವಿಚಾರ ಎತ್ತ ಬಾರದಿತ್ತು. ಆದರೆ ಅವನಿಗೂ ಉದ್ವೇಗ. ಅಪ್ಪನಿಗೆ ಏನಾಗಿರಬಹುದು, ಡಾಕ್ಟರ್ ಏನು ಹೇಳಿದರು ಎಂದು ತಿಳಿಯುವ ತವಕ. ಯಾವುದೇ ಸಂದೇಶ ಬಂದಿಲ್ಲವೆಂದು ತಿಳಿದಿದ್ದರೂ ಐದೈದು ನಿಮಿಷಕ್ಕೂ ಫೋನ್ ನೋಡುತ್ತಲೇ ಇದ್ದ. 

ಇನ್ನು ಸುದ್ದಿಗಾಗಿ ಕಾಯಲಾಗದೆ ರಮೇಶನಿಗೆ ಫೋನ್ ಮಾಡಿದ. ಒಂದೇ ರಿಂಗಿನಲ್ಲಿ ರಮೇಶ ಉತ್ತರಿಸಿದ. 

"ಅಣ್ಣ...ಇನ್ನು ಮಲ್ಗಿಲ್ವೇನೋ?" ಸಹಜವಾಗಿ ಕೇಳಿದ ರಮೇಶ. 

"ನಿದ್ದೆ ಹೇಗೋ ಬರುತ್ತೆ...ಅಲ್ಲಿಂದ ಏನೂ ಸುದ್ದೀ ನೇ ಇಲ್ಲ... "

"ಗಾಬರಿಯಾಗ್ಬೇಡ ರಾಘವ... ಅಪ್ಪನಿಗೆ ಹಾರ್ಟ್ ಅಟ್ಯಾಕ್ ಆಗಿದ್ಯಂತೆ. ಇಪ್ಪತ್ನಾಲ್ಕು ಘಂಟೆ ಅಬ್ಸರ್ವೇಷನ್ ಅಂತೆ. ಐ.ಸಿ.ಯು ನಲ್ಲಿ ಇಟ್ಟಿದ್ದಾರೆ. " ರಮೇಶ ಹೇಳಿದ. ಅವನ ಧ್ವನಿ ಶಾಂತವಾಗಿಯೇ ಇತ್ತು. 

"ಹಾಂ...." ಒಂದು ಕ್ಷಣ ರಾಘವನಿಗೆ ಏನು ತೋಚಲಿಲ್ಲ. ಮೌನವಾಗಿದ್ದ. "ಸರಿ. ಈಗ ಜ್ಞಾನ ಬಂದಿದ್ಯ?" ಕೇಳಿದ. 

"ಇಲ್ಲವಂತೆ. ನನಗೆ ಒಳಗೆ ಹೋಗೋ ಅವಕಾಶ ಇಲ್ಲ. ಐ.ಸಿ.ಯು ಆಚೆ ಕೂತಿದೀನಿ. " ರಮೇಶ ಹೇಳಿದ. 

"ಅಮ್ಮ ಹೇಗಿದ್ದಾಳೆ?" ರಾಘವ್ ಕೇಳಿದ. ಅವಳನ್ನು ತಕ್ಷಣ ನೋಡುವ ಮನಸ್ಸಾಯಿತು. 

"ಪುಷ್ಪ ನೋಡ್ಕೋತಿದಾಳೆ. ಸ್ವಲ್ಪ ಶಾಕ್ ಆಗಿದ್ಲು. ಆಗುತ್ತೆ ಅಲ್ವಾ..... ಈಗ ಮಲಗಿರಬಹುದು. ಬೆಳಗ್ಗೆ ಮಾತಾಡು. "

"ಹೂ..ಸರಿ. ನೀನು ಹುಷಾರು. ನಾನು ಬರ್ಬೇಕಾದ್ರೆ ಹೇಳು....ತಕ್ಷಣ ಹೊರ್ಡ್ತೀನಿ. ಇಲ್ಲ ಅಪ್ಪ ಮನೆಗೆ ಬಂದ ತಕ್ಷಣ ಬರ್ತೀನಿ."

"ಸರಿ ಅಣ್ಣ.. ಆತುರ ಬೇಡ. ಸದ್ಯಕ್ಕೆ ಪರಿಸ್ಥಿತಿ ಕಂಟ್ರೋಲ್ ನಲ್ಲಿದೆ. ಆಂಬ್ಯುಲೆನ್ಸ್ನಲ್ಲಿ ನನಗೆ ಒಂದೆರಡು ನಿಮಿಷ ಕೈಕಾಲೇ ಆಡ್ಲಿಲ್ಲ. ಈಗ ಪರವಾಗಿಲ್ಲ." ಮೊದಲ ಬಾರಿಗೆ ರಮೇಶ ತನ್ನ ಒತ್ತಡವನ್ನು ತೋಡಿಕೊಂಡ. 

"ಸರಿ. ಸ್ವಲ್ಪ ರೆಸ್ಟ್ ತೊಗೊ....ಕಷ್ಟ...ಗೊತ್ತು.." ರಾಘವನಿಗೆ ಮುಂದೆ ಏನು ಮಾತಾಡಲು ತೋಚಲಿಲ್ಲ. 

"ಸರಿ ರಾಘವ.. "ಎಂದು ರಮೇಶ ಫೋನಿಟ್ಟ.

ಅತ್ತ ರಾಘವನಿಗೆ ಒಂದೊಂದು ನಿಮಿಷವೂ ಒಂದೊಂದು ಯುಗದಂತಿದ್ದರೆ, ಇತ್ತ ರಮೇಶನಿಗೆ ಸಮಯದ ಪರಿವೇ ಇರಲಿಲ್ಲ. ಕಳೆದ ಮೂರ್ನಾಲ್ಕು ಘಂಟೆಗಳಲ್ಲಿ ಏನೆಲ್ಲಾ ನಡೆದುಹೋಗಿತ್ತು. ಅಪ್ಪ ಬಚ್ಚಲುಮನೆಯಲ್ಲಿ ಯಾವಾಗ ಕುಸಿದರು ಯಾರಿಗೂ ಗೊತ್ತಿಲ್ಲ. ಊಟ ಮಾಡಿ ಕೈ ತೊಳೆಯಲು ಹೋದವರು ಹತ್ತು ನಿಮಿಷವಾದರೂ ಹೊರಬಾರದಿದ್ದಾಗ ಸಂಧ್ಯಾ ತುಂಟತನದಿಂದ ಬಾಗಿಲು ತಟ್ಟಲು ಶುರುಮಾಡಿದಳು. ಆ ಕಡೆಯಿಂದ ಉತ್ತರವೇ ಇಲ್ಲದಿದ್ದಾಗ ರಮೇಶನಿಗೆ ಗಾಬರಿಯಾಯಿತು. ಅವನು, ಪುಷ್ಪ, ಅಮ್ಮ ಎಲ್ಲರು ಬಾಗಿಲನ್ನು ಜೋರಾಗಿ ಬಡಿದರು. ಉತ್ತರವೇ ಇಲ್ಲ. ಅಮ್ಮ ಕಂಗಾಲಾಗಿ ಸೋಫಾದ ಮೇಲೆ ಕುಳಿತರು. ರಮೇಶ ಪಕ್ಕದ ಮನೆ ಜಾನಿಯನ್ನು ಕರೆದು ಇಬ್ಬರು ಬಲ ಪ್ರಯೋಗ ಮಾಡಿ ಬಾಗಿಲನ್ನು ಒಡೆದರು. ನೋಡಿದರೆ ಅಪ್ಪ ನೆಲದ ಮೇಲೆ ಬಿದ್ದಿದ್ದಾರೆ. ಜ್ಞಾನವೇ ಇಲ್ಲ. ಕ್ಷೀಣವಾಗಿ ಉಸಿರಾಡುತ್ತಿದ್ದಾರೆ. ಯಾವುದೋ ಮಾಯದಲ್ಲಿ ಪುಷ್ಪ ಅಂಬ್ಯುಲನ್ಸಗೆ ಫೋನ್ ಮಾಡಿದ್ದಳು. ಆಕೆಯ ಸಮಯ ಪ್ರಜ್ಞೆ ಮೆಚ್ಚಲೇಬೇಕು. ಹತ್ತೇ ನಿಮಿಷದಲ್ಲಿ ಆಂಬುಲೆನ್ಸ್ ಮನೆಯ ಮುಂದಿತ್ತು. ಅಷ್ಟರೊಳಗೆ ಆಕೆ ಇವನಿಗೆ ಸ್ವಲ್ಪ ದುಡ್ಡು, ಫ್ಲಾಸ್ಕ್ ನೀರು, ಕ್ರೆಡಿಟ್ ಕಾರ್ಡ್, ಪವರ್ ಬ್ಯಾಂಕ್ ಜೊತೆಗೆ ಒಂದು ಹೊದಿಕೆಯನ್ನು ತಯಾರು ಮಾಡಿದ್ದಳು. ಕಂಗಾಲಾಗಿ ಕುಳಿತ್ತಿದ್ದ ಅತ್ತೆಯನ್ನು ನಿಧಾನವಾಗಿ ಕೇಳಿ ಮಾವನ ಕನ್ನಡಕ, ಒಂದೆರಡು ಬಟ್ಟೆ ಹಾಗು ಅವರ ಬಿ.ಪಿ. ಮಾತ್ರೆಯನ್ನು ಪ್ಯಾಕ್ ಮಾಡಿದ್ದಳು. Stretcherನಲ್ಲಿದ್ದ ಅಪ್ಪನ ಜೊತೆ ರಮೇಶ ಆಂಬುಲೆನ್ಸ್ ಏರಿದ. "ಯೋಚ್ನೆ ಮಾಡ್ಬೇಡ. ಮನೆ ನಾ ನೋಡ್ಕೋತೀನಿ . ಮಾವನ್ನ ನೋಡ್ಕೋ" ಎಂದು ಸ್ಥೈರ್ಯ ನೀಡಿ ಕಳಿಸಿದ್ದಳು. 

ರಮೇಶ ಐ. ಸಿ. ಯು. ಬಾಗಿಲನ್ನು ದಿಟ್ಟಿಸಿ ನೋಡಿದ. ಬೆಳಗ್ಗೆ ಡಾಕ್ಟರ್ ಬರುವವರೆಗೂ ಯಾವ ಖಚಿತ ಸುದ್ದಿಯೂ ಬರುವಂತೆ ಕಾಣಲಿಲ್ಲ. ಚಡಪಡಿಕೆ ತಾಳಲಾರದೆ ಡ್ಯೂಟಿ ನರ್ಸ್ ಬಳಿ ಹೋಗಿ "ಮಿಸ್ಟರ್ ರಾಧಾಕೃಷ್ಣ ಹೇಗಿದ್ದಾರೆ?" ಎಂದ. "ಏನೂ ತೊಂದ್ರೆ ಇಲ್ಲ ಬಿಡ್ರಿ" ಎಂದು ನರ್ಸ್ ಸ್ವಲ್ಪ ಲಘುವಾಗಿ ಹೇಳಿದಳು. ರಮೇಶ ಕೋಪ ಬಂದರು ತಾಳ್ಮೆ ಕಳೆದುಕೊಳ್ಳಲಿಲ್ಲ. ಏನೂ ಮಾತಾಡದೆ ತನ್ನ ಜಾಗಕ್ಕೆ ಹಿಂದಿರುಗಿದ. ನರ್ಸ್ಗೆಗೆ  ಏನನ್ನಿಸಿತೋ. "ಸಾರ್.. ಅವ್ರು ಮಲಗಿದ್ದಾರೆ. ಐ. ಸಿ. ಯು. ನಲ್ಲಿ ನೋ ನ್ಯೂಸ್ ಇಸ್ ಗುಡ್ ನ್ಯೂಸ್ ಸಾರ್. " ಎಂದು ಸಮಾಧಾನದ ಮಾತಾಡಿದಳು. 

                                                **********************************

"ನೋ ನ್ಯೂಸ್ ಇಸ್ ಗುಡ್ ನ್ಯೂಸ್.... ರಾಘವ" ರಮೇಶ ಬೆಳಗ್ಗೆ ಅಣ್ಣನಿಗೆ ಹೇಳಿದ. ರಾಘವನಿಗೆ ಕೊಂಚ ನೆಮ್ಮದಿ. ಪರಿಸ್ಥಿತಿ ಹೆಚ್ಚೇನೂ ಬದಲಾಗಿರಲಿಲ್ಲ. ಆದರೆ ರಮೇಶನ ಧ್ವನಿಯಲ್ಲಿ ಧೈರ್ಯ. ಅತ್ತ ಪುಷ್ಪಾಳಿಗು  ಫೋನ್ ಮಾಡಿದ್ದ. ಅಮ್ಮ ಶಾಂತವಾಗಿದ್ದಳು. "ಪುಷ್ಪ ಮಗಳ ಹಾಗೆ ನಿಂತು ನನ್ನನ್ನ ನೋಡ್ಕೋತಿದಾಳೆ" ಎಂದಾಗ ಸಂತೋಷವೂ ಆಯಿತು. ತಾನು ಅಲ್ಲಿಲ್ಲವಲ್ಲ ಎಂಬ ಸಂಕಟವೂ ಆಯಿತು. 

"ನನಗೂ ಇಲ್ಲಿ ಬಹಳ ಕಷ್ಟವಾಗ್ತಿದೆ. ಅಪ್ಪ ಬಂದ ತಕ್ಷಣ ಹೊರಟು ಬರ್ತೀನಿ. " ಎಂದ ರಾಘವ. 

"ಹೂ ರಾಘವ...ನೋಡೋಣ.. ಏನೇನಾಗುತ್ತೋ.. "ಎನ್ನುತ್ತಾ ಅಮ್ಮ ಫೋನ್ ಇಟ್ಟಳು. 

ಇತ್ತ ವಿಶ್ವಾಸ್ ಪುಟ್ಟ ಪುರಂದರ ದಾಸರ ವೇಷ ಧರಿಸಿ ತಂದೆಯ ಮುಂದೆ ಬಂದು ನಿಂತ. ಅಂದು ಅವನ ಶಾಲೆಯ ವಾರ್ಷಿಕೋತ್ಸವ. ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಾಗಿ ಒಂದು ವಾರದಿಂದಲೇ ತಯಾರಿ ನಡೆದಿತ್ತು. ಧರಿಸಿದರೆ ದಾಸರ ವೇಷವನ್ನೇ ವಿಶ್ವಾಸ್ ಧರಿಸಬೇಕು ಎಂಬ ತನ್ನ ಮಾತನ್ನು ಮಾಲತಿ ಸಂಪೂರ್ಣವಾಗಿ ಒಪ್ಪಿದ್ದಳು. ವಿಶ್ವಾಸ್ ಗೆ  ದಾಸರ ಬಗ್ಗೆ ಸಣ್ಣ ಕತೆ ಹೇಳಿ, ಅವನು ವೇದಿಕೆ ಮೇಲೆ ಹೋಗಿ "ಅಂದು ನವಕೋಟಿ ನಾರಾಯಣ, ಇಂದು ಪುರಂದರ ದಾಸ" ಎಂದು ಇಂಗ್ಲಿಷ್ನಲ್ಲಿ ಹೇಳಬೇಕು ಎಂದು ನಿರ್ಧಾರವಾಗಿತ್ತು. 

ವಿಡಿಯೋ ಕಾಲ್ ನಲ್ಲಿ ಅಪ್ಪನಿಗೆ ಇದನ್ನು ಹೇಳಿದಾಗ, ಅಪ್ಪ "ಇಷ್ಟೇ ಮಾಡಿದ್ರೆ  ಏನು ಸುಖ ? ಅಲ್ಲಿರೋ ರಿಗೆ ಏನು ತಿಳಿಯೊಲ್ಲ. ರಾಘವ..ದಾಸರ ಬಗ್ಗೆ ಒಂದು ಸಣ್ಣ ಟಿಪ್ಪಣಿ ಮಾಡಿ  ಹಂಚು....ಆಮೇಲೆ....ವಿಶ್ವಾಸ್ ಗೆ ನಾ ಹೇಳ್ಕೊಡ್ತೀನಿ....ಈ ದಾಸರ ಪದದ ಎರಡು ಸಾಲು ಹಾಡ್ಲಿ 'ಜಗದೋದ್ಧಾರನ....ಆಡಿಸಿದಳೆ ಯಶೋಧೆ.. " ಎಂದು ಹೇಳಿಕೊಟ್ಟರು. ತೊದಲು ನುಡಿಯಲ್ಲಿ ಮುದ್ದಾಗಿ ವಿಶ್ವಾಸ್ ಅದನ್ನು ಒಪ್ಪಿಸಿದ್ದು ಕೇಳಿ ಅವರಿಗೆ ಎಷ್ಟೋ ಖುಷಿ. 

"ಲೇ ರಾಘವ..ಅಲ್ಲೇ ಸಂಗೀತದ ಕ್ಲಾಸ್ ಇದ್ರೆ ಸೇರಿಸೋ..." ಎಂದಿದ್ದರು. 

ಇಂದು ವಾರ್ಷಿಕೋತ್ಸವದ ಕಾರ್ಯಕ್ರಮ ಮುಗಿದಮೇಲೆ ಅಲ್ಲಿಂದಲೇ ಅಪ್ಪನಿಗೆ ಕರೆ ಮಾಡುವುದೆಂದು ಮಾತಾಗಿತ್ತು. 

ಮನಸಿಲ್ಲದ ಮನಸ್ಸಿನಿಂದ ರಾಘವ ಕಾರ್ಯಕ್ರಮಕ್ಕೆ ತಯಾರಾದ. ಮಾಲತಿ "ಇಲ್ಲಿ ಕೂತು ನಾವೇನು ಮಾಡೋಕ್ಕಾಗಲ್ಲ. ಅಲ್ಲಿ ಸ್ವಲ್ಪ ಹೊತ್ತು ನೀವೂ ಯೋಚನೆಯಿಂದ ದೂರವಿರಬಹುದು. ಹೇಗಿದ್ರು ರಮೇಶ್ ಫೋನ್ ಮಾಡ್ತಾರಲ್ಲ..."ಎಂದಳು. 

ಕಾರ್ ಹತ್ತುವ ವೇಳೆಗೆ ರಮೇಶನಿಂದ ಕರೆ ಬಂತು. "ರಾಘವ...ಅಪ್ಪನಿಗೆ ಆಪರೇಷನ್ ಮಾಡಬೇಕಂತೆ. ಇನ್ನೆರಡು ಘಂಟೇಲಿ. ನಾನು ಒಪ್ಪಿಗೆ ಕೊಟ್ಟಾಯಿತು. . ರಾತ್ರಿ ಮೇಲೆ ಗೊತ್ತಾಗುತ್ತೆ..ಮುಂದೇನು ಅಂತ"

"ಹಾಗಾದ್ರೆ...ನಾ ಈಗ್ಲೇ ಹೊರಡಲ?" ರಾಘವ ಕೇಳಿದ. 

"ಬೇಡ...ಆ.. ರಾತ್ರಿ ಹೇಳ್ತಿನಿ" ಇತ್ತ ರಮೇಶನಿಗೂ ಕಸಿವಿಸಿ. ಇತ್ತ ರಾಘವ ತಕ್ಷಣಕ್ಕೆ ಬಂದು ಮಾಡುವುದೇನು ಇರಲಿಲ್ಲ. ತಾನೇ ಅಪ್ಪನನ್ನು ಒಂದೆರಡು ನಿಮಿಷ ನೋಡಿದ್ದಿರಬೇಕು, ಐ. ಸಿ. ಯು. ಗೆ ಸೇರಿಸಿದ ಮೇಲೆ. ಆದರೆ, ತನ್ನ ಮಾತು ಕೇಳಿ, ಅವನು ಬರದೇ ಅಪ್ಪನಿಗೆ ಏನಾದರೂ...?

ಏನಾದರೂ ಆಗಲಿ, ರಾತ್ರಿ ಆಪರೇಷನ್ ಮುಗಿದ ಮೇಲೆ ಅವನನ್ನು ಕರೆಸಿಕೊಳ್ಳಲು ನಿರ್ಧರಿಸಿದ. 

                                           *******************************************

ರಾತ್ರಿ ಒಂಭತ್ತಾಗಿತ್ತು. ರಾಘವನಿಂದ ರಮೇಶನಿಗೆ ವಿಡಿಯೋಸಹಿತ ಸಂದೇಶ. "ಅಪ್ಪನಿಗೆ ತೋರಿಸು" ಎಂದು. ವಿಶ್ವಾಸ್ ಪುರಂದರ ದಾಸರ ವೇಷದಲ್ಲಿ ವೇದಿಕೆ ಮೇಲೆ ನಿಂತು "ಜಗದ್ದೋದ್ದಾರನ...." ಹಾಡುತ್ತಿದ್ದಾನೆ. ಅಪ್ಪನ ತಾಲೀಮು ಎಂದು ರಮೇಶನಿಗೂ ತಿಳಿದಿತ್ತು. 

ಅಮ್ಮ, ಪುಷ್ಪ, ಸಂಧ್ಯಾ ಎಲ್ಲರು ಇವನೊಂದಿಗೆ ಆಸ್ಪತ್ರೆಯಲ್ಲೇ ಬೀಡು ಬಿಟ್ಟಿದ್ದರು. ಮೌನವಾಗಿ ಕೂತಿದ್ದವರಿಗೆ ರಮೇಶ ವಿಶ್ವಾಸ್ ನ ವಿಡಿಯೋ ತೋರಿಸಿದ. ಅವನ ತಾಯಿಗೆ ಮೊಮ್ಮಗನ ವೇಷ ಕಂಡು ಸಣ್ಣದಾದ ನೆಮ್ಮದಿಯ ನಗು. 

"ತದ್ರೂಪು ರಾಘವನೇ . ನಿಮ್ಮ ತಂದೆ ಎರಡನೇ ಕ್ಲಾಸಿನಲ್ಲಿ  ರಾಘವನಿಗೆ ಈ ವೇಷ ಹಾಕ್ಸಿದ್ರು" ಎಂದಳು. 

"ಓ ಹೌದ... ಈ ವಿಷಯ ಗೊತ್ತೇ ಇರಲಿಲ್ಲ...ಅದಕ್ಕೆ ರಾಘವನಿಗೆ ಈ ಉಪಾಯ ಹೊಳೆದಿರೋದು"

"ಒಂದು ಮಟ್ಟಿಗೆ ದಾಸರ ಪದ ಹಾಡ್ತಿದ್ರು, ನಿಮ್ಮ ಮಾವ...ಈಗ ಬಿಟ್ಟಿದ್ದಾರೆ" ಎಂದು ತನ್ನ ಗಂಡನ ಹೊಸ ಪರಿಚಯ ಮಾಡಿಕೊಡುವಂತೆ ಪುಷ್ಪಳಿಗೆ ಹೇಳಿದಳು. 

"ಮನೆಗೆ ಬಂದ ಮೇಲೆ ಮತ್ತೆ ಹಾಡ್ಸೋಣ ಬಿಡಿ" ಎಂದಳು ಪುಷ್ಪ. 

"ಯಾಕೋ ಕಾಣೆ...ನನಗೆ ನಾನೇ ಧೈರ್ಯ ತಂದ್ಕೋತಾ ಇದ್ದೀನಿ." ಎಂದು ರಮೇಶನ ತಾಯಿ ಶೂನ್ಯ ನೋಟವನ್ನು ಬೀರಿದಳು. 

                                           ************************************

ರಾಘವ ಜರ್ಮನಿಯಿಂದ ಹೊರಟಾಗಿತ್ತು. ವಿಮಾನದಲ್ಲಿ ಅಪ್ಪ ಪ್ರಯಾಣ ಮಾಡುವಾಗ ಮೋಡಗಳ ಆಕಾರಗಳನ್ನು ಗಮನಿಸುತ್ತ ಖುಷಿ ಪಡುತ್ತಿದ್ದುದು ನೆನಪಾಯಿತು. ವಿಮಾನಗಳ ರೂಟ್ ನೆನಪಿಟ್ಟುಕೊಳ್ಳುವ ವಿಚಿತ್ರ ಹವ್ಯಾಸ ಅವರದ್ದು. 

"ಆಪರೇಷನ್ ಮುಗೀತು.ಅಬ್ಸರ್ವೇಷನ್ ಅಂತೆ. ನೀನು ಹೊರಟು ಬಾ...."ಎಂದು ದೂರವಾಣಿ ಮಾಡಿದಾಕ್ಷಣ ಹೊರಟಿದ್ದ. ಮಾಲತಿ,ವಿಶ್ವಾಸ್ ರನ್ನು ಕರೆದುಕೊಂಡು ಬರುವ ತಾಳ್ಮೆ ಇರಲಿಲ್ಲ. 

ಪ್ರಯಾಣದುದ್ದಕ್ಕೂ ಅಪ್ಪನದೇ ಫೋಟೋ ವಿಡಿಯೋಗಳು, ಐ ಪ್ಯಾಡ್ ನಲ್ಲಿ. ಅವರ-ಅಮ್ಮನ ಇಪ್ಪತೈದನೇ ಮದುವೆ ವಾರ್ಷಿಕೋತ್ಸವ, ಮಹಾಬಲೇಶ್ವರ ಪ್ರವಾಸ, ಕಶ್ಮೀರ ಪ್ರವಾಸ; ಅಲ್ಲಿನ ದಲ್ ಸರೋವರದಲ್ಲಿನ ದೋಣಿಯಲ್ಲಿ ಅಪ್ಪ ಅಮ್ಮನಿಗೆ ಹೂ ನೀಡಿದ್ದು, ಜರ್ಮನಿಗೆ ಬಂದು ವಿಶ್ವಾಸ್ ನನ್ನು ಮೊದಲ ಬಾರಿ ಎತ್ತುಕೊಂಡಿದ್ದು ಎಲ್ಲವನ್ನು ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ನೋಡಿದ. ಕಿಟಕಿಯಿಂದಾಚೆ ಮೋಡಗಳಲ್ಲೂ ಅಪ್ಪನ ಮುಖವನ್ನೇ ಕಂಡ. 

ತಾನು ಜರ್ಮನಿಗೆ ಹೊರಟಾಗ, "ನನಗೂ ನಿಮ್ಮಮ್ಮನಿಗೂ ಎಪ್ಪತ್ತಾಗುವುದರೊಳಗೆ ನೀನು ಇಲ್ಲಿಗೆ ವಾಪಸ್ಸಾಗಬೇಕು..."ಎಂಬ ಅವರ ಷರತ್ತನ್ನು ಇವನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅಪ್ಪ ಗುಣವಾದರೆ ಈಗಲೇ ಜರ್ಮನಿಯಿಂದ ಸಂಸಾರ ಸಮೇತ ಹಿಂದಿರುಗುತ್ತೇನೆ ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಕೊಂಡ. 

ಇತ್ತ ಅಮ್ಮ, ಪುಷ್ಪ ಮನೆಗೆ ಹಿಂದಿರುಗಿದ್ದರು. ಅಪ್ಪನ ಆಪರೇಷನ್ ನಂತರ ಅರ್ಧ ಘಂಟೆ ಅವರ ಪಕ್ಕದಲ್ಲಿ ಕೂರಲು ಅಮ್ಮನಿಗೆ ಅವಕಾಶ ಮಾಡಿಕೊಟ್ಟಿದ್ದರು. ಅಪ್ಪನಿಗೆ ಇನ್ನು ಜ್ಞಾನ ಬಂದಿರಲಿಲ್ಲ. ಆದರೆ ಅಮ್ಮನಿಗೆ ಏನೋ ನೆಮ್ಮದಿ. ಡಾಕ್ಟರ್ ರಮೇಶನನ್ನು ಕರೆದು "ಆಪರೇಷನ್ ಮಾಡಿದ್ದೀವಿ. ಯಾವುದಕ್ಕೂ ಸ್ವಲ್ಪ ಸಮಯ ಬೇಕು. He is responding, though" ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟರು. ಪುಷ್ಪಳ ಹತ್ತಿರ ಹೇಳಿಕೊಂಡ ರಮೇಶ, ಅಮ್ಮನಿಗೆ ತಿಳಿಸಲಿಲ್ಲ. ರಾಘವನಿಗೆ ಫೋನ್ ಮಾಡಿ ಹೊರಡಲು ಹೇಳಿದ್ದ.   

                                        ***************************************

ರಾತ್ರಿಯೆಲ್ಲ ರಮೇಶ ಐ.ಸಿ.ಯು. ಮುಂದೆ ಕುಳಿತ್ತಿದ್ದ. ಮುಂಜಾನೆ ವೇಳೆಗೆ ಐ.ಸಿ.ಯು. ಒಳಗೆ ಏನೋ ಗದ್ದಲ, ಚಟುವಟಿಕೆ. ಒಳಗೂ -ಹೊರಗೂ ಓಡಾಡುತ್ತಿದ್ದ ನರ್ಸ್ ಗಳು ಇವನನ್ನೇ ಕಳವಳದಿಂದ ನೋಡುತ್ತಿದ್ದರು. ರಮೇಶನಿಗೆ ಗಾಬರಿಯಾಯಿತು. ಐ.ಸಿ.ಯು. ಡೆಸ್ಕ್ ಬಳಿ ಹೋಗಿ "ನರ್ಸ್, ಏನಾಯಿತು? ಯಾಕೆ ಏನೋ ಟೆನ್ಶನ್ನಲ್ಲಿ ಓಡಾಡುತ್ತಿದ್ದಾರೆ ಎಲ್ಲರು?" ಎಂದು ಕೇಳಿದ. 

ಆಕೆಗೆ ಒಂದು ಕ್ಷಣ ಏನು ಹೇಳಲೂ ತೋಚಲಿಲ್ಲ. ನಿಧಾನವಾಗಿ "ಸಾರ್...ನಿಮ್ಮ ತಂದೆ ಆರೋಗ್ಯ ಮತ್ತೆ ಏರುಪೇರಾಗಿದೆ. ಡ್ಯೂಟಿ ಡಾಕ್ಟರ್ ನೋಡ್ತಿದಾರೆ. ಸ್ಪೆಷಲಿಸ್ಟ್ ಬರ್ತಿದಾರೆ..ನೀವು ಕೂತಿರಿ" ಎಂದಳು. 

ರಮೇಶನಿಗೆ ತನ್ನ ಕಾಲುಗಳ ಶಕ್ತಿಯೇ ಉಡುಗಿಹೋದಂತಾಯಿತು. ನರ್ಸ್ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಳು. ಅವನಿಗೆ ಏನೂ ಕೇಳಿಸಲಿಲ್ಲ. ಐ.ಸಿ.ಯು. ನಿಂದ ಆಚೆ ಬಂದ  ಡ್ಯೂಟಿ ಡಾಕ್ಟರ್ ಇವನ ಹೆಗಲ ಮೇಲೆ ಕೈ ಹಾಕಿ ಅವನನ್ನು ಅಲ್ಲೇ ಇದ್ದ ಸೋಫಾದ ಮೇಲೆ ಕೂರಿಸಿದರು. ಪರಿಸ್ಥಿತಿಯ ವಿವರಣೆ ನೀಡಿದರೋ ಏನೋ - ರಮೇಶನಿಗೆ ಯಾವುದೂ ಅರ್ಥವಾಗಲಿಲ್ಲ. 

"ಸೋ...ಮಿಸ್ಟರ್ ರಮೇಶ್.. ಮಿಸ್ಟರ್ ರಾಧಾಕೃಷ್ಣ ಈಗ ಲೈಫ್ ಸಪ್ಪೋರ್ಟ್ ನಲ್ಲಿದ್ದಾರೆ. ನೀವು ಹೇಳಿದಾಗ... ಯಾರಾದ್ರೂ ಕಡೆ ಬಾರಿ ನೋಡೋರಿದ್ರೆ....  " ರಮೇಶ ಡಾಕ್ಟರ್ ಅವರ ವಾಕ್ಯಗಳನ್ನು ಪೂರ್ಣಗೊಳಿಸಲು ಹಿಂಜರಿಯುತ್ತಿದ್ದುದನ್ನು ಗಮನಿಸಿದ. ಅವನೂ ತನ್ನ ತಾಯಿಗೆ, ರಾಘವನಿಗೆ ಈ ಸುದ್ದಿ ಹೇಳುವಾಗ ಹಾಗೆ ಮಾಡಬೇಕೇನೋ..? ಎಂದು ಯೋಚಿಸಿದ. 

ಸೌಜನ್ಯದ ಸಲುವಾಗಿ ಡ್ಯೂಟಿ ಡಾಕ್ಟರ್ ಇವನೊಂದಿಗೆ ಹತ್ತು ನಿಮಿಷ ಕೂತಿದ್ದರು. ಐ.ಸಿ.ಯು.ನ ನರ್ಸ್ ಬಂದು ಇವನನ್ನು ಒಳಗೆ ಕರೆದೊಯ್ದಳು. ಒಳಗೆ ಅಪ್ಪ ಲೈಫ್ ಸಪೋರ್ಟ್ ನಲ್ಲಿ. "ಆಪರೇಷನ್ ಆದ್ಮೇಲೆ ಅಪ್ಪನಿಗೆ ಜ್ಞಾನ ಬರ್ಲಿಲ್ವಾ?" ಕೇಳಿದ ರಮೇಶ್. ಇಲ್ಲ ಎಂದು ನರ್ಸ್ ತಲೆ ಅಲ್ಲಾಡಿಸಿದಳು. ಸಾವಿನ ಬಗ್ಗೆ ರಮೇಶ ಒಂದೆರಡು ಬಾರಿ ತಂದೆಯೊಡನೆ ಚರ್ಚಿಸಿದ್ದ. ಅವರಿಬ್ಬರಿಗೂ ಸಾವಿನ ಬಗ್ಗೆ ಕುತೂಹಲ. 

"ಕಡೆಯ ಕ್ಷಣದವರೆಗೂ ನನಗೆ ಜ್ಞಾನ ಇರಬೇಕು ರಮೇಶ.. ..ಸಾವು ಅಂದ್ರೆ ಏನೂಂತ ನನಗೆ ಗೊತ್ತಾಗಬೇಕು." ಎಂದು ಹೇಳಿದ್ದರು. 

"ಇಲ್ಲಪ್ಪ... ನನಗೆ ಆ ಅನುಭವವೇ ಬೇಡ.." ಎಂದು ಇವನು ಹೇಳಿದ್ದ.  

"ಬದುಕಿನಂತೆ ಸಾವು ಕೂಡ ಒಂದು ಅನುಭವ ರಮೇಶ..."ಎಂದಿದ್ದರು. ಅಂಥವರಿಗೆ ಜ್ಞಾನ ಹೋಗಿ ಎರಡು ದಿನವಾಗಿತ್ತು. ಬಾತ್ ರೂಮಿನಲ್ಲಿ ಜ್ಞಾನ ಹೋಗುವ ಮುನ್ನ ಅಪ್ಪ ಏನು ಯೋಚನೆ ಮಾಡುತ್ತಿದ್ದಿರಬಹುದು? ಇವನಿಗೆ ನೆನಪಾಗಿದ್ದು ಅಪ್ಪ ತಮ್ಮ ಊಟ ಮುಗಿಸಿ, ಸಂಧ್ಯಾಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಮೊಸರನ್ನ ತಿನ್ನಿಸಿದ್ದು. ಯಾಕೋ ಏನೋ, ರಮೇಶ ಅದರ ಫೋಟೋ ತೆಗೆದಿದ್ದ. ಈಗ ನಿಶ್ಚಲವಾದ ಅವರ ದೇಹದ ಮುಂದೆ ನಿಂತು ಆ ಫೋಟೋ ನೋಡಿದ. 

ನಿಟ್ಟುಸಿರು ಬಿಡುತ್ತ ಐ.ಸಿ.ಯು. ನಿಂದ ಆಚೆ ಬಂದ . ಮನಸ್ಸು ಮುಂದೆ ನಡೆಯಬಹುದಾದ ಘಟನೆಗಳೊಂದಿಗೆ ರಾಜಿಯಾಗುತ್ತಿತ್ತು. ನಿರ್ವಾಹವಿಲ್ಲದೆ ಪುಷ್ಪಾಳಿಗೆ ಫೋನ್ ಮಾಡಿದ. ಬೇರೆಯೇನೂ ಹೇಳದೆ "ಅಮ್ಮನಿಗೆ ಕೊಡು" ಎಂದ.  ಸುತ್ತಿ ಬಳಸಿ ಮಾತಾಡುವುದು ಅಮ್ಮನಿಗೆ ಎಂದೂ ಇಷ್ಟವಿರಲಿಲ್ಲ. 

"ಅಮ್ಮ...ಅಪ್ಪ ಉಳಿಯೊಲ್ವಂತೆ. ಲೈಫ್ ಸಪೋರ್ಟ್. ಅವರನ್ನ ಕಡೆ ಬಾರಿ ಜೀವಂತವಾಗಿ ನೋಡೋದಿದ್ರೆ ಬಂದು ನೋಡ್ಲಿ ಅಂದ್ರು ಡಾಕ್ಟರ್." ಎಂದು ಒಂದೇ ಉಸಿರಲ್ಲಿ ಹೇಳಿ ಮುಗಿಸಿದ. ಅವನ ಎದೆ ವೇಗವಾಗಿ ಬಡಿದುಕೊಳ್ಳುತ್ತಿತ್ತು. ಅಮ್ಮ ಹೇಗೆ ಪ್ರತಿಕ್ರಿಯಿಸುವಳೋ ಎಂಬ ಭಯ, ಉದ್ವೇಗ. ಕೆಲವು ಕ್ಷಣ ಆ ಕಡೆಯಿಂದ ಯಾವುದೇ ಮಾತು ಕೇಳಿಸಲಿಲ್ಲ. ಅಮ್ಮ ಅಳುತ್ತಿರಬೇಕು. ಸದ್ಯ, ಅವಳ ಆರೋಗ್ಯಕ್ಕೆ ಏನು ತೊಂದರೆಯಾಗದಿದ್ದರೆ ಸಾಕು ಎಂಬ ಯೋಚನೆ ಹಾದು ಹೋಯಿತು. ಆ ಕಡೆ ಮತ್ತೆ ಅಮ್ಮನ ಧ್ವನಿ. 

"ಒಂದು ಕೆಲಸ ಮಾಡು. ನಾನೇನು ಬರೋದಿಲ್ಲ. ರಾಘವ ಬಂದಮೇಲೆ ನೀವಿಬ್ಬರೇ ಅವರನ್ನ ಕರೆದುಕೊಂಡು ಬನ್ನಿ.." ಎಂದು ದಿಟ್ಟವಾಗಿ ಹೇಳಿದಳು. 

"ಆದರೆ ಅಮ್ಮ.." ಎಂದು ರಮೇಶ ಶುರು ಮಾಡಿದ. 

"ಇಲ್ಲ ಪರವಾಗಿಲ್ಲ. ನಾ ಹೇಳಿದಷ್ಟು ಮಾಡು ರಮೇಶ.." ಎಂದು ಹೇಳಿ ಫೋನ್ ಇಟ್ಟಳು. 

                                         ****************************************

ಬೆಂಗಳೂರು ತಲುಪಿದ ರಾಘವ ಆಸ್ಪತ್ರೆಗೆ ಧಾವಿಸಿದ. ರಮೇಶ ಕೂತಿದ್ದಲ್ಲಿಗೆ ಬಂದ. ಇಬ್ಬರು ಒಬ್ಬರನ್ನೊಬ್ಬರು ನೋಡಿಕೊಂಡರು. ರಮೇಶನ ಮುಖ ನೋಡಿದಾಗಲೇ ರಾಘವನಿಗೆ ಅರ್ಧದಷ್ಟು ವಿಷಯ ತಿಳಿದು ಹೋಯಿತು. 

"ಸರಿ...ಏನಂತೆ ಈಗ?" ಕೇಳಿದ. 

"ಲೈಫ್ ಸಪೋರ್ಟ್, ಅಣ್ಣ. ನೀನು ಬರ್ಲಿ ಅಂತ ಕಾಯ್ತಿದ್ದೆ." ದುಃಖದಿಂದ ಹೇಳಿದ ರಮೇಶ. ಅಮ್ಮನಿಗೆ, ಪುಷ್ಪಾಳಿಗೆ ತೋರಿಸದ ಉದ್ವೇಗ ಅಣ್ಣನೆದುರು ಸರಾಗವಾಗಿ ಹರಿಯಿತು. 

"ನಾನು ಅವರನ್ನು ನೋಡಬಹುದ?" ಎಂದ ರಾಘವ, ಗದ್ಗದಿತವಾಗಿ. ನರ್ಸ್ ಇಬ್ಬರನ್ನೂ ಒಳಗೆ ಬಿಟ್ಟಳು. 

ಈ ಲೋಕದ ಪರಿವೆ ಇಲ್ಲದೆ ಮಲಗಿದ್ದ ಅಪ್ಪನನ್ನು ನೋಡುವುದು ರಾಘವನಿಗೆ ಕಷ್ಟವಾಯಿತು. ಅದರಲ್ಲೂ ವಾರದ ಹಿಂದೆ ಲವಲವಿಕೆಯಿಂದ ಮಿಡಿಯುತ್ತಿದ್ದ ಜೀವ. ಎಷ್ಟೋ ಹೊತ್ತು ಅವರನ್ನೇ ನೋಡುತ್ತಾ ನಿಂತಿದ್ದ.  ರಮೇಶನೇ ಮೌನ ಮುರಿದು, "ಇನ್ನೇನು ಮಾಡಲು ಸಾಧ್ಯವಿಲ್ಲ ಅಣ್ಣ. We should take a call" ಎಂದ. ಒಪ್ಪುವುದು ಕಷ್ಟವಾದರೂ ಅದು ಸರಿಯಾದ ಮಾತು ಎಂದು ರಾಘವನಿಗೆ ಗೊತ್ತಿತ್ತು. 

"ಅಪ್ಪನಿಗೆ ಈ ಸಾಯುವ ಹೊತ್ತು ,ಘಳಿಗೆ....ನಂಬಿಕೆಯಿತ್ತ?" ಕೇಳಿದ. 

"ಇಲ್ಲಣ್ಣ. ಸಾಯುವಾಗ ಜ್ಞಾನ ಇರಬೇಕು ಅಂತ ಆಸೆ ಇತ್ತು...ಅಷ್ಟೇ" ಅವರನ್ನೇ ನೋಡುತ್ತಾ ಹೇಳಿದ ರಮೇಶ್. 

"ಹೇಗೆ ಕಳಿಸಿಕೊಡೋದು? ಡಾಕ್ಟರ್ ಗೆ ಹೇಳಿದ್ರೆ ಎಲ್ಲ ಮುಗೀತಾ? ಅಷ್ಟೇನಾ?" ಕೇಳಿದ ರಾಘವ. ಒಂದು ಸಣ್ಣ ಮಾತು ಬದುಕಿಗೂ, ಸಾವಿಗೂ ಇರುವ ವ್ಯತ್ಯಾಸವ?

"ಅಷ್ಟೇ ಇರಬೇಕು..ಎಲ್ಲಾದ್ರೂ ಸಹಿ ಹಾಕಿಸಬಹುದು"

"ಇಲ್ಲ... I want to give him a proper send-off" ಹೇಳಿದ ರಾಘವ. ಎಲ್ಲೋ ಏನೋ ಅಪೂರ್ಣವಾಗಿತ್ತು. ಅಪ್ಪನಿಗೆ ಇಷ್ಟವಾಗುವ, ತನಗೆ ನೆಮ್ಮದಿ ತರುವುದನ್ನೇನಾದರೂ   ಮಾಡಬೇಕು ಎಂದು ಅವನ ಮನಸ್ಸು ಹಾತೊರೆಯುತ್ತಿತ್ತು. ಒಂದೈದು ನಿಮಿಷ ಚಡಪಡಿಸಿದ. ಬಳಿಕ ಅದೇನನ್ನಿಸಿತೋ ಫೋನ್ ತೆಗೆದು ಅವರ ಕಿವಿಯ ಪಕ್ಕದಲ್ಲಿಟ್ಟ. "ಜಗದೋದ್ಧಾರನ...ಆಡಿಸಿದಳೆ ಯಶೋಧೆ" ಎಂಬ ವಿಶ್ವಾಸ್ ನ ತೊದಲ್ನುಡಿಯ ಹಾಡು ಅವರ ಕಿವಿಯ ಮೇಲೆ ಬಿತ್ತು. ಅವರ ಅಸ್ತಿತ್ವದ ಯಾವುದೋ ಒಂದು ಭಾಗ ಮೊಮ್ಮಗನ ಹಾಡು ಕೇಳಿರಬಹುದು ಎಂದು ತನಗೆ ತಾನೇ ಸಾಂತ್ವನ ಹೇಳಿಕೊಂಡ. ಹಾಡು ಮುಗಿದ ಮೇಲೆ ಒಂದೆರಡು ನಿಮಿಷ ಅವರನ್ನು ನೋಡಿ 

"ನಡಿ ಹೋಗೋಣ ರಮೇಶ" ಎಂದ. ಇಬ್ಬರೂ ಐ.ಸಿ.ಯು. ನಿಂದ ಆಚೆ ಬಂದರು. 

ಡ್ಯೂಟಿ ಡಾಕ್ಟರ್ ಪತ್ರದೊಂದಿಗೆ ಸಿದ್ಧವಾಗಿದ್ದರು. ರಾಘವ, ರಮೇಶ ಮುಖಮುಖ ನೋಡಿಕೊಂಡರು. "ನೀನೆ ಸಹಿ ಹಾಕು" ಎಂದು ಹೇಳಿ ರಾಘವ ಮಾಲತಿಗೆ ಕರೆ ಮಾಡಲು ಹೋದ. 

ನಡುಗುತ್ತಿದ್ದ ಕೈಗಳಿಂದ ರಮೇಶ ಸಹಿ ಮಾಡಿದ. ಆ ಕ್ಷಣವನ್ನು ಅವನು ಮರೆಯುವುದು ಎಂದೂ  ಸಾಧ್ಯವಿರಲಿಲ್ಲ. "ಹೋಗಿ ಬನ್ನಿ ಅಪ್ಪ" ಎಂದು ತಂದೆಯನ್ನು ನೆನೆದು ಅಲ್ಲೇ ಇದ್ದ ಚೇರ್ ಮೇಲೆ ಕುಸಿದು ಕುಳಿತ....... 

                                                                                                    - 15th February 2022














Saturday, February 13, 2021

ಕಲ್ಬೆಂಚು

 ಕಲ್ಬೆಂಚು 

ನನಗೂ ವಯಸ್ಸು ಎಂಭತ್ತು ಮೀರಿತ್ತು. ಊರುಗೋಲು ಸಹಾಯಕ್ಕೆ ಬಂದು ಹತ್ತು ವರ್ಷದ ಮೇಲಾಗಿತ್ತು. ಈಚೆಗೆ, ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಿದ್ದೆ. ಮನೆ ಇದ್ದದ್ದು ಒಳ್ಳೆಯ ಬಡಾವಣೆಯಲ್ಲೇ. ಅಕ್ಕ ಪಕ್ಕದವರೂ ಒಳ್ಳೆಯವರೇ. ಆದರೂ ಒಂದು ರೀತಿಯ ಭಯ. ಮೊದಮೊದಲು ಏಕಾಂತ ಬೇಕಾಗಿತ್ತು. ಕ್ರಮೇಣವಾಗಿ ಏಕಾಂತ ಏಕಾಂಗಿತನವಾಯಿತು. ನಂತರ ಜನರ ಸಂಪರ್ಕವೆಂದರೆ ಒಂದು ರೀತಿಯ ರೇಜಿಗೆ. ಈಗ, ಜನರನ್ನು ಕಂಡರೆ ಒಂದು ರೀತಿಯ ಭಯ. 

Easychairನಲ್ಲಿ ಕುಳಿತು ಕಾನಡ ರಾಗದ ಆಲಾಪನೆ ಕೇಳುತ್ತಿದ್ದೆ. ಬೆಳಗಿನ ತಿಂಡಿ ಮುಗಿದಿತ್ತು. ರಂಗಪ್ಪ ಊಟಕ್ಕೆ ತಿಳಿಸಾರು, ಅನ್ನ ಮಾಡಿ ಒಂದೆರಡು ಎಸಳು ಈರುಳ್ಳಿ ಕೂಡ Dining Table ಮೇಲಿಟ್ಟು ಹೋಗಿದ್ದ. ನನ್ನ ಅತಿ ಸಣ್ಣ ಬೇಡಿಕೆಗಳೂ ಅವನಿಗೆ ತಿಳಿದ್ದಿದ್ದರಿಂದಲೇ ನನ್ನವರೆಲ್ಲರು ದೂರವಾದಮೇಲೂ ಅವನಿಗೆ ನನ್ನ ಮನೆಯಲ್ಲಿ, ಮನಸ್ಸಿನಲ್ಲಿ ಸ್ವಲ್ಪ ಜಾಗವಿತ್ತು. ಹೂ...ನನ್ನ ಅಸಹಾಯಕತೆಯು ಅದಕ್ಕೊಂದು ಕಾರಣವಿರಬಹುದು. ಇತ್ತೀಚೆಗೆ ನನ್ನ ಊರುಗೋಲಿನ ನಂತರ ಈತನೇ ನನಗೆ ಮುಖ್ಯವಾದವನು. Important...not close. Close.. but not close enough.

Laptop ಪಕ್ಕದಲ್ಲಿದ್ದ ಮೊಬೈಲ್ ರಿಂಗಣಿಸಿತು. ಮೆಡಿಕಲ್ ಸ್ಟೋರಿನಿಂದ ಕರೆ ಬರುತ್ತಿತ್ತು. 

"ಹೇಳಿ"

"ಸಾರ್...ನಿಮ್ಮ ಔಷದಿ pack ಮಾಡಿದ್ದೀವಿ. " ಎಂದ ಅಂಗಡಿಯವ. 

"ಸರಿ, ಎಂದಿನಂತೆ ಮನೆಗೆ ಕಳಿಸಿ. "

"ಹುಡುಗ  ರಜೆಯಲ್ಲಿದಾನೆ ಸಾರ್.  ನೀವೇ ಯಾರಾದ್ರೂ ಬಂದ್ರೆ..."

"ಅಲ್ಲಯ್ಯ..ನಾನು ಬರೋದೇ..?ನೀನೆ ಬಾ..ಐವತ್ತು ರೂಪಾಯಿ ಹೆಚ್ಚು ಕೊಡ್ತೀನಿ" ಮನೆಯಿಂದ ಕಾಲು ಆಚೆ ಇಡುವ ಶಕ್ತಿ, ತಾಳ್ಮೆ ಎರಡೂ ನನಗಿರಲಿಲ್ಲ. 

"ಇಲ್ಲ ಸಾರ್. ಬೇಕಿದ್ರೆ ಯಾರ್ನಾದ್ರು ಕಳಿಸಿ. ಅಥವಾ ನೀವೇ ಬನ್ನಿ. ಇವತ್ತು ನನ್ನ ಬಿಟ್ರೆ ಇಲ್ಲಿ ಯಾರು ಇಲ್ಲ. " ಎಂದು ಗಡುಸಾಗಿ ಮಾತಾಡಿ ಸ್ಟೋರಿನವ ಫೋನ್ ಇಟ್ಟ. 

ಇತ್ತ ರಂಗಪ್ಪ ಮತ್ತೆ ಬರುವುದು ನಾಳೆ ಮುಂಜಾನೆ, ತಿಂಡಿ ಮಾಡುವುದಕ್ಕೆ. ಹೊರಡುವಾಗ ಆತ "ಇದು ಬೆಳಗಿನ ಬಿಪಿ ಮಾತ್ರೆ. ಸಂಜೆ ಹೊತ್ತಿಗೆ ಔಷಧಿ ಕಳಿಸ್ತಾರೆ. ಅದ್ರಿಂದ ನೀವು ತೊಗೋಬೇಕು" ಎಂದು ಹೇಳಿ ಹೋಗಿದ್ದ. ಒಂದು ಹೊತ್ತು ಬಿಪಿ ಮಾತ್ರೆ ತಪ್ಪಿದರೆ ಪ್ರಾಣವೇನು  ಹೋಗುತ್ತಿರಲಿಲ್ಲ.  ಆದರೂ ಜೀವದ ಮೇಲೆ ವ್ಯಾಮೋಹ. ಊಟ ತಪ್ಪಿದರೂ ಮಾತ್ರೆ ತಪ್ಪಬಾರದು ಎಂಬ ನಿರರ್ಥಕ ಶಿಸ್ತು. ಒಂದು ಸಾರಿ ಹೊರಗೆ ಹೋಗಿಬಂದರೆ ಕನಿಷ್ಠ ಒಂದು ದಿನವೆಲ್ಲ ಸುಧಾರಿಸಿಕೊಳ್ಳಬೇಕಾಗಬಹುದು ಎಂಬುದು ತಿಳಿದಿದ್ದರೂ ಮೆಡಿಕಲ್ ಸ್ಟೋರ್ಗೆ ನಾನೇ ಹೋಗಿಬರಲು ನಿರ್ಧರಿಸಿದೆ. 

 ಬಾಗಿಲು ತೆರೆದಾಕ್ಷಣ ಮಧ್ಯಾಹ್ನದ ಬಿಸಿಲು ಕಣ್ಣಿಗೆ ರಾಚಿತು. ಮನೆಯಾಚೆ ಕಾಲಿಟ್ಟು ಒಂದು ತಿಂಗಳಾಗಿರಬಹುದು. ಮನೆಯೊಳಗಿನ ಮಂದ ಬೆಳಕಿಗೆ ಕಣ್ಣು, ಮನಸ್ಸು, ಒಗ್ಗಿ ಹೋಗಿತ್ತು. ಹೊರಗಿನ ಬೆಳಕಿನ ಆಡಂಬರಕ್ಕಿಂತ ಮನೆಯ ಮಂದ ಬೆಳಕು ಹೆಚ್ಚಿನ ನೆಮ್ಮದಿ ನೀಡಿತ್ತು. ಕೈಯಲ್ಲಿ ಊರುಗೋಲು ಹಿಡಿದು ರಂಗಪ್ಪನನ್ನು, ಮೆಡಿಕಲ್ ಸ್ಟೋರಿನವನನ್ನು, ನನ್ನ ಅಸಹಾಯಕತೆಯನ್ನು ಶಪಿಸುತ್ತ ಮೆಡಿಕಲ್ ಸ್ಟೋರಿನತ್ತ ನಡೆದೆ. 

ಸ್ಟೋರ್ ಇದ್ದದ್ದು ಮನೆಯಿಂದ ಅರ್ಧ ಮೈಲಿ ದೂರದಲ್ಲಿ. ಮನೆಯಿಂದ ಸ್ವಲ್ಪ ದೂರ ಬಂದು, ಮುಖ್ಯ ರಸ್ತೆ ಹೊಕ್ಕು, ಸ್ವಲ್ಪ ದೂರ ನಡೆದರೆ ಅಲ್ಲೊಂದು ಕ್ರಾಸಿಂಗ್. ಅದನ್ನು ದಾಟಿದರೆ, ಬಲಕ್ಕೆ ಸ್ವಲ್ಪ ದೂರದಲ್ಲಿ ಮೆಡಿಕಲ್ ಸ್ಟೋರ್. ಈ ರಸ್ತೆ ದಾಟುವುದೊಂದೇ, ಈ ಅರ್ಧ ಮೈಲಿ "ಯಾತ್ರೆ"ಯ ತೊಂದರೆ. ಯೌವ್ವನದಲ್ಲಿ ಪರ್ವತಗಳನ್ನು ಸರಾಗವಾಗಿ ಹತ್ತಿದ್ದ ನನಗೆ, ಈಗ ರಸ್ತೆ ದಾಟುವುದೆಂದರೆ ವಿಪರೀತ ಭಯ. ಜೊತೆಗೆ ಮುಜುಗರ. ಯಾರನ್ನಾದರು ಸಹಾಯ ಬೇಡಬೇಕು. ಅವರು ನನ್ನನ್ನು ಹಿಡಿದು ರಸ್ತೆ ದಾಟಿಸುತ್ತಾರೆ. ಅವರ ಪರಿಚಯವೇ ಇಲ್ಲದಿದ್ದರು ಅವರು ನನ್ನನ್ನು ಮುಟ್ಟಲು ಬಿಡಬೇಕು. ನಂತರ ಕೃತಕ ಕೃತಜ್ಞತೆಯ ನಗು. ಸಹಾಯ ಮಾಡುವವರಿಗೂ ಒಂದು ಸ್ವಾರ್ಥವಿರುತ್ತದೆ ಎಂಬುದು ನನ್ನ ವಾದ. ನಾನು ನನ್ನ  ಕೆಲಸಕ್ಕೆ ರಸ್ತೆ ದಾಟಬೇಕು. ಅವರು, ಅವರ ಆತ್ಮತೃಪ್ತಿಗೆ ನನ್ನನ್ನು ಕೈ ಹಿಡಿದು ದಾಟಿಸುತ್ತಾರೆ. You can  assist only those who want your assistance. 

ಆ ದಿನ  ನನ್ನನ್ನು ರಸ್ತೆ ದಾಟಿಸಿದ್ದು ಒಬ್ಬ ಮಧ್ಯ ವಯಸ್ಕ. ನನ್ನ ಮಗ ಕಿಶೋರನಿಗೂ ಇವನಷ್ಟೆ ವಯಸ್ಸಿರಬಹುದು. ಆದರೆ ಅವನ ಮುಖ ಈತನಿಗಿಂತ ಎಷ್ಟೋ ಕಳೆಯಾಗಿದೆ. Ph.D ಮಾಡಿರುವವನ ಕಳೆ. ದೇಶಗಳನ್ನು ಸುತ್ತಿ, ಕೋಶವನ್ನು ಓದಿದ ಬುದ್ಧಿಜೀವಿಯ ಕಳೆ . ವಾರಕ್ಕೊಂದು ಫೋನ್ ಮಾಡಿ ಮಗನ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಿರುವವನ ಕಳೆ. ದೇಶವನ್ನು ಬಿಟ್ಟು ಪರದೇಶಿಯಾಗಿ ಸಂಸ್ಕೃತಿ-ಸಂಪ್ರದಾಯಗಳನ್ನು ಮೆರೆಯುತ್ತಿರುವವನ ಕಳೆ. 

ರಸ್ತೆ ದಾಟಿಸಿದ ಪುಣ್ಯಾತ್ಮ ಕಣ್ಣೆದುರಿಂದ, ಮನಸ್ಸಿನಿಂದ ಮರೆಯಾದ. ಆದರೆ ಮಗನ ಮುಖ ಮಾತ್ರ ಕಣ್ಣ ಮುಂದೆಯೇ ನಿಂತಿತ್ತು. ಮೈ ಮನಸ್ಸುಗಳನ್ನು ಕೊಡವಿಕೊಂಡು ಮೆಡಿಕಲ್ ಸ್ಟೋರ್ ಕಡೆಗೆ ನಡೆದೆ. 

ಸ್ಟೋರಿನಿಂದ ಸ್ವಲ್ಪ ದೂರದಲ್ಲಿರುವಾಗಲೇ ಅಂಗಡಿಯವ ನನ್ನನ್ನು ಗುರುತು ಹಿಡಿದ. ಮೊದಲೇ ಔಷಧಿಗಳನ್ನು pack   ಮಾಡಿದ್ಧ. ನಾನು ಪ್ಯಾಂಟ್ ಜೇಬಿನಲ್ಲಿ ಹಣ ಇರುವುದು ಖಾತ್ರಿ ಮಾಡಿಕೊಂಡೆ. ಕಿಶೋರ ಎಷ್ಟೋ ಬಾರಿ Wallet ಉಪಯೋಗಿಸಲು ಒತ್ತಾಯ ಮಾಡಿ ಸೋತಿದ್ದ. ಸಂಪಾದನೆ ಮಾಡಿದ್ದ ಅಲ್ಪ-ಸ್ವಲ್ಪ ಹಣವನ್ನು ಜೋಪಾನ ಮಾಡಲು ಮತ್ತೆ ಖರ್ಚು ಮಾಡಿ Wallet ಕೊಳ್ಳುವ ಪ್ರಮೇಯವೇನು ಇಲ್ಲವೆಂಬುದು ನನ್ನ ವಾದ. ಹಣ ಕಷ್ಟಪಟ್ಟು ಸಂಪಾದಿಸಿದ್ದರೆ ಅದನ್ನು ಜೋಪಾನ ಮಾಡುವ ಶಿಸ್ತು ತಾನಾಗಿಯೇ ಬರುತ್ತದೆ. 

"ತಪ್ಪು ತಿಳಿಬೇಡಿ ಸಾರ್.. ಇವತ್ತು ಅಂಗಡಿಯಲ್ಲಿ ನನ್ನ ಬಿಟ್ಟರೆ ಯಾರು ಇಲ್ಲ.." ಎಂದ ಅಂಗಡಿಯವ, ಔಷಧಿ ಪ್ಯಾಕೇಜ್ ಕೊಡುತ್ತ.

"ಪರವಾಗಿಲ್ಲ ಬಿಡಿ" ಎಂದೇ ನಾನು, ದುಡ್ಡು ಎಣಿಸುತ್ತ. ಅಂಗಡಿಯವನಿಗೆ ದುಡ್ಡು ಕೊಟ್ಟು ಹೊರಟೆ. 

"Thank You Sir. Sorry for the inconvenience" ಎಂಬ ಅವನ ಮಾತಿಗೆ ಸ್ಪಂದಿಸುವ ಅವಶ್ಯಕತೆಯೇನು ಕಾಣಲಿಲ್ಲ. 

 ಮೆಡಿಕಲ್ ಸ್ಟೋರಿಗೆ ಬರುವಾಗ ನನ್ನ ಕಣ್ಣಿಗೆ ಬಿದ್ದಿರಲೇ ಇಲ್ಲ. ಅಥವಾ ನಾನು ಗಮನಿಸಿಯೇ ಇರಲಿಲ್ಲ. ಈಗ ನನ್ನ ಕಣ್ಮುಂದೆಯೇ ನಿಂತಿತ್ತು -  ಆ ಕಲ್ಬೆಂಚು. ನಿಟ್ಟುಸಿರು ಬಿಡುತ್ತ ಅದರ ಮುಂದೆ ನಿಂತೆ. ಸಧ್ಯದಲ್ಲೇ ಬಣ್ಣ ಬಳಿದಿರಬೇಕು. ಬಿಸಿಲಿಗೆ ಹೊಳೆಯುತ್ತಿತ್ತು. ಎಡಬದಿಯಲ್ಲಿನ ಆನೆಯ ಕೆತ್ತನೆ; ಬಲಬದಿಯಲ್ಲಿನ ಸಿಂಹದ ಕೆತ್ತನೆ ಈಗಲೂ ಜೀವಂತವಾಗಿತ್ತು. ಒರಗುವ ಕಲ್ಲಿಗೆ ಎಲೆಗಳ ಕೆತ್ತನೆ. ಸುಮಾರು ನೂರು ವರ್ಷಗಳ ನಂತರವೂ ಕಲ್ಬೆಂಚಿನ ಕಾಲುಗಳು ಬಲಿಷ್ಠವಾಗಿದ್ದವು. ಮಧ್ಯಾಹ್ನದ ಬಿಸಿಲಿನ ತಾಪದೊಂದಿಗೆ ಹುದುಗಿದ್ದ ನೆನಪುಗಳ ಒತ್ತಡ ನನ್ನ ಶಕ್ತಿಯನ್ನು ಕಸಿಯುತ್ತಿತು. ಎಷ್ಟೋ ವರ್ಷಗಳ ನಂತರ ಕಲ್ಬೆಂಚಿನ ಮೇಲೆ ಕುಳಿತೆ.  

                                                       **************************

" ಊಟ ಮಾಡು ಕೃಷ್ಣ" ಅಮ್ಮ ನನ್ನ ಹಿಂದೆ ಅನ್ನದ ಪಾತ್ರೆ ಹಿಡಿದು ಓಡಿಬರುತ್ತಿದ್ದಳು. ಇಡೀ ಬಡಾವಣೆಯಲ್ಲಿದ್ದದ್ದು ಬಹುಶಃ ನಾಲ್ಕು ಮನೆ. ಮನೆ ಮುಂದೆ ದೊಡ್ಡ ಮೈದಾನ. ಮೈದಾನದ ಒಂದು ಬದಿಯಲ್ಲಿ ಕಲ್ಬೆಂಚು. ಅದರ ಮೇಲಿನ ಆನೆ ಸಿಂಹಗಳ ಕೆತ್ತನೆಯೆಂದರೆ ಏನೋ ಒಂದು ರೀತಿಯ ಆಕರ್ಷಣೆ. ನಿಜವಾದ ಆನೆ ಸಿಂಹ ನೋಡಿರಲಿಲ್ಲ. ಮನೆಯಲ್ಲಿದ್ದ ಮರದ ಬೊಂಬೆಗಳೊಂದಿಗೆ ಆಟವಾಡಿ ಬೇಸರವಾಗಿತ್ತು. ನಾಲ್ಕು ವರ್ಷದ ನನಗೆ ಮನೆಯಿಂದ ಕಲ್ಬೆಂಚಿನವರೆಗು ಓಡುವುದೇ ಒಂದು ಆಟವಾಗಿತ್ತು. ಅದರ ಮೇಲೆ ಹತ್ತಿ ಮೈದಾನದಲ್ಲಿ ಆಗತಾನೇ ನೆಟ್ಟಿದ್ದ ಸ್ವತಂತ್ರ ಭಾರತದ ಬಾವುಟ ನೋಡುವುದು ಮತ್ತೊಂದು ಖುಷಿ. ಊಹೂ...ನಾಲ್ಕು ವರ್ಷದ ನನಗೆ ಸ್ವಾತಂತ್ರದ ಪರಿಕಲ್ಪನೆಯಿತ್ತೆಂದಲ್ಲ.  ಊಟ ಮಾಡಿಸುತ್ತ ಅಮ್ಮ ಬಾವುಟದಲ್ಲಿನ ಬಣ್ಣಗಳ ಹೆಸರು ಹೇಳಿಕೊಡುತಿದ್ದಳು. "ಕೇಸರಿ, ಬಿಳಿ, ಹಸಿರು" ಮನದಟ್ಟಾಗುವುದರಲ್ಲಿ ಹುಳಿಯನ್ನ ಮುಗಿದು ಮೊಸರನ್ನ ನಡೆಯುತ್ತಿತ್ತು. ಆ ವೇಳೆಗೆ ಸರಿಯಾಗಿ ಎಲ್ಲಿಂದಲೋ ಬರುತ್ತಿದ್ದ ಕಾಗೆ. ಆ ವಯಸ್ಸಿನಲ್ಲೂ ಊಟದ ಕಡೆಯ ತುತ್ತು ಅದಕ್ಕೆ ಕೊಡಬೇಕೆಂದು ಹಠ ಹಿಡಿಯುತ್ತಿದ್ದೆ. ನನ್ನ ಹಠ ತಾಳಲಾರದೆ ಅಮ್ಮ ಕಡೆಯ ತುತ್ತು ಕಾಗೆಗೆ ಹಾಕುತ್ತಿದ್ದಳು. "ಬಳಿದು ಭಾಗ್ಯವಂತನಾಗು" ಎಂದು ಅಮ್ಮ ಯಾರಿಗೆ ಹೇಳುತ್ತಿದ್ದಳು ಎಂದು ನೆನಪಾಗುತ್ತಿಲ್ಲ. ಆ ಭಾಗ್ಯ...ಆ ಕಾಗೆಯದ್ದೇ ತಾನೇ?

                                                       ****************************

"ಸಾ...ಧಿಂ..ಚನೇ  ..." ಎಂದು ಕಲ್ಬೆಂಚಿನ ಮೇಲೆ ಕುಳಿತು ಸಂಗೀತಾಭ್ಯಾಸ ಮಾಡುತ್ತಿದೆ. ವಯಸ್ಸು ಹದಿನೇಳಿರಬೇಕು. ಸುಮಾರು ಹತ್ತು ವರ್ಷಗಳಿಂದ ನರಸಿಂಹ ಶಾಸ್ತ್ರಿಗಳ ಬಳಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದೆ. ಅಟ್ಟತಾಳ ವರ್ಣಗಳನ್ನು ಒಂದು ಸ್ವರವು ಮರೆಯದಂತೆ ಒಪ್ಪಿಸಿದ ಮೇಲೆ ಶಾಸ್ತ್ರಿಗಳು ಪಂಚರತ್ನ ಕೃತಿಗಳ ಪಾಠ ಶುರು ಮಾಡಿದ್ದು. 

ಮೇಘ "ಸಾಧಿಂಚನೆ.." ಕಲಿಯಲು ಶುರುಮಾಡುವುದರೊಳಗೆ ನಾನು ಅದೇ ಹಂತ ತಲುಪಬೇಕು ಎಂದು ಮೂರು ತಿಂಗಳ ಕಾಲ ಶ್ರಮ ಪಟ್ಟಿದ್ದೆ. ಅವಳೊಂದಿಗೆ ಮಾತಾಡುವಷ್ಟು ಧೈರ್ಯ ಇರಲಿಲ್ಲ. ಅವಳ ಸಮಕ್ಕೆ ಪಾಠ ಕಲಿತರೆ ಅವಳು ಹಾಡುವ ಪಾಠಕ್ಕೆ ನಾನೂ ದನಿಗೂಡಿಸಬಹುದು- ಎಂಬ ಸಣ್ಣದಾದ ದೊಡ್ಡ ಆಸೆ. ಹಾಡಿನ ಜೊತೆ ದನಿಗೂಡಿಸುತ್ತ, ನಂತರ ಸಣ್ಣದಾಗಿ ನಕ್ಕು, ಹೆಸರು ಗೊತ್ತಿದ್ದರೂ ಪರಿಚಯ ಮಾಡಿಕೊಂಡು, ಸಂಗೀತದ ಬಗೆಗಿನ ಸಂದೇಹಗಳನ್ನು ಕೇಳುತ್ತ ಸಲುಗೆ ಬೆಳೆಸಿ....ಸರ್ಕಾರದ ಪಂಚವಾರ್ಷಿಕ ಯೋಜನೆಗಳಷ್ಟೇ ಮಹತ್ತರವಾಗಿತ್ತು ನನ್ನ ಯೋಜನೆ ಕೂಡ. 

ಕಲ್ಬೆಂಚು ಈಗ ಮೈದಾನದಲ್ಲಿರಲಿಲ್ಲ. ಮೈದಾನದ ಸುತ್ತ ಬಡಾವಣೆ ದೊಡ್ಡದಾಗಿತ್ತು. ಮೈದಾನದ ಒಳಗಿನಿಂದ ರಸ್ತೆಗಳನ್ನು ಕೊರೆದಿದ್ದರು. ಯಾರೋ ಪುಣ್ಯಾತ್ಮ engineer ಕಲ್ಬೆಂಚಿನ ಹತ್ತಿರ ರಸ್ತೆ ಸಾಗದಂತೆ ನೋಡಿಕೊಂಡಿದ್ದ. ಕಲ್ಬೆಂಚು ಇನ್ನು ಜೀವಂತವಾಗಿತ್ತು. 

ಮೇಘ ಸಂಗೀತ ಪಾಠ ಮುಗಿಸಿ ಮನೆಗೆ ಹೋಗುವಾಗ ಕಲ್ಬೆಂಚನ್ನು ಹಾದುಹೋಗಬೇಕೆಂಬುದು ನನಗೆ ತಿಳಿದಿತ್ತು. ಪ್ರತಿ ಗುರುವಾರ ಅವಳು ಬರುವ ಅಂದಾಜು ಹೊತ್ತಿಗೆ ಅಲ್ಲೇ ಕೂತು ಅಭ್ಯಾಸ ಮಾಡುತ್ತಿದ್ದೆ. ಅವಳು ದೂರದಲ್ಲಿ ಬರುತ್ತಿದ್ದಾಗ ಇನ್ನು ಪಕ್ವವಾಗಬೇಕಿದ್ದ ಸಂಗೀತ ಏರು ಪೇರಾಗುತ್ತಿದ್ದುದೇ ಹೆಚ್ಚು. ಆದರೂ ಮನಸ್ಸು "ನನ್ನ ತಪ್ಪನ್ನು ಸರಿ ಮಾಡಲಾದರೂ  ಆಕೆ ಒಂದು ಕ್ಷಣ ನಿಲ್ಲಬಾರದೇ" ಎಂದು  ಚಡಪಡಿಸುತ್ತಿತ್ತು. 

ಆ ದಿನ ಅವಳಿಗೆ ಏನನ್ನಿಸಿತೋ. ನನಗಂತೂ ಯಾವ ತಪ್ಪು ಮಾಡಿದ ನೆನಪಿಲ್ಲ. ನಾನು ಕಣ್ಮುಚ್ಚಿ ಮೈಮರೆತು ಹಾಡುವಾಗ ನನ್ನ ದನಿಯ ಜೊತೆ ಆಕೆಯ ದನಿಯೂ ಸೇರಿತು. ನರಸಿಂಹ ಶಾಸ್ತ್ರಿಗಳ ಮನೆಯಲ್ಲಿ ಮಾತ್ರ ಆಕೆಯ ದನಿಯನ್ನು ಕೇಳಿದ್ದೆ, ನಾಲ್ಕು ಗೋಡೆಗಳ ಮಧ್ಯೆ. ತೆರೆದ ಬಯಲಲ್ಲಿ ಆಕೆಯ ಧ್ವನಿ ಮತ್ತೂ ಇಂಪಾಗಿತ್ತು. ಸಣ್ಣದಾಗಿ ನಗುತ್ತ "ಸಾ...ಧಿಂ..ಚನೇ..." ಎಂದು ಮೇಘ ನನ್ನೊಂದಿಗೆ ಹಾಡುತ್ತಿದ್ದಳು! ಅವಳನ್ನೇ ನೋಡುತ್ತಿದ್ದ ನಾನು ಪಲ್ಲವಿಯ ನಂತರ ಹಾಡು ನಿಲ್ಲಿಸಲೇಬೇಕಾಯಿತು. ಹಾಡು ನಿಲ್ಲಿಸಿದ ತಕ್ಷಣ ಮೇಘ ಸಣ್ಣ ಮುಗುಳ್ನಗೆ ನಕ್ಕು ಅಲ್ಲಿಂದ ನಡೆದು ಹೋದಳು. ಬಹುಶಃ ಹಾಡು ನಿಲ್ಲಿಸದಿದ್ದರೆ.....ಇನ್ನು ಸ್ವಲ್ಪ ಹೊತ್ತು ನಿಲ್ಲುತ್ತಿದ್ದಳೇನೋ?

                                                    *****************************

ಅಪ್ಪ-ನಾನು ಒಟ್ಟಾಗಿ ಆ ಕಲ್ಬೆಂಚಿನ ಮೇಲೆ ಕುಳಿತು ಮೂವತ್ತು ವರ್ಷಗಳಾಗಿದ್ದವು. ಮಿಡ್ಲ್ ಸ್ಕೂಲ್ನಲ್ಲಿ ಅಮ್ಮ ನನ್ನ ತಮ್ಮನನ್ನು ಸಂಭಾಳಿಸುತ್ತಿದ್ದಾಗ ನನ್ನ ಓದಿಗೆ ತೊಂದರೆಯಾಗಬಾರದೆಂದು ಕಲ್ಬೆಂಚಿನ ಮೇಲೆ ಬೀದಿ ದೀಪದ ಬೆಳಕಿನಲ್ಲಿ ಅಪ್ಪನ ಮನೆಪಾಠ. English, ಗಣಿತ, ಕನ್ನಡ ಎಲ್ಲವು. ಹದಿಮೂರರ ಮಗ್ಗಿ ಮರೆತು ಏಟು ತಿಂದದ್ದು ಅಲ್ಲೇ. ಬಂಗಾಳದ ರಾಜಧಾನಿ ನೆನಪಾಗದೆ ಭಯದಿಂದ ಬೆಂಚಿನಿಂದ ಬಿದ್ದು ಮಂಡಿ ಗಾಯವಾದದ್ದೂ ಅಲ್ಲೇ. 

ಮೂವತ್ತು ವರ್ಷಗಳ ನಂತರ "ಬಾ...ಆ ಬೆಂಚಿನ ಮೇಲೆ ಸ್ವಲ್ಪ ಕೂತು ಬರೋಣ" ಎಂದು ಅಪ್ಪ ಕರೆದರು. He was clearly feeling nostalgic that evening.  ಆ ವೇಳೆಗೆ ಬಡಾವಣೆ ಮತ್ತೂ ಬೆಳೆದಿತ್ತು. ಕಲ್ಬೆಂಚು  ಈಗ ಫುಟ್ಪಾತ್ ಮೇಲೆ. ಯಾರೋ ಕಳೆದ ವರ್ಷ ಬಣ್ಣ ಬಳಿದಿದ್ದರು. ಆನೆ ಸಿಂಹಗಳ ಕೆತ್ತನೆ ಕಂಡಾಗ ಬಾಲ್ಯದ ನೆನಪುಗಳು ಮರುಕಳಿಸಿದವು. 

ಇಬ್ಬರೂ ಕಲ್ಬೆಂಚಿನ ಮೇಲೆ ಕೂತೆವು. ನಾನು ಕೆಲಸ ಮಾಡುತ್ತಿದುದು ಬಾಂಬೆಯಲ್ಲಿ. ವೈಶಾಲಿಯನ್ನು ಮದುವೆಯಾಗಿ ಕಿಶೋರ ಹುಟ್ಟಿದ್ದ. ಅಪ್ಪ-ಅಮ್ಮ ಇಲ್ಲಿ ಅಕ್ಷಯ್ ಜೊತೆ. ತಿಂಗಳಿಗೆರಡು ಪತ್ರ. ಒಂದು ಟ್ರಂಕ್ ಕಾಲ್. ಆರು ತಿಂಗಳಿಗೊಮ್ಮೆ ಹತ್ತು ದಿನದ ಭೇಟಿ. ಸಹಜವಾಗಿ ನನಗೂ ಅಪ್ಪ ಅಮ್ಮನಿಗೂ ಸ್ವಲ್ಪ ಅಂತರ ಬೆಳೆದಿತ್ತು. 

"ಕಿಶೋರ ಚೂಟಿಯಾಗಿದಾನೆ...Smart Boy " ಎಂದರು ಅಪ್ಪ. 

"ಹೌದಪ್ಪ...ಐದು ವರ್ಷದ ಮಟ್ಟಿಗೆ ಅವನು ಬುದ್ಧಿವಂತ" ಎಂದೆ. ಸ್ವಲ್ಪ ಹೊತ್ತು ಇಬ್ಬರು ಮೌನವಾಗಿ ಕುಳಿತಿದ್ದೆವು. 

"ಬಾಂಬೆಯಲ್ಲಿ ಹಣಕ್ಕೇನು ತೊಂದರೆ ಇಲ್ಲ ತಾನೇ?" ಅಪ್ಪ ಕೇಳಿದರು. ಸ್ವಲ್ಪ ಸ್ವಾಭಿಮಾನಿಯಾದ ನನಗೆ, ಇಂತಹ ಪ್ರಶ್ನೆಗಳೆಂದರೆ ಮುಜುಗರ. ಆದರೂ, ಅದು ಅಪ್ಪನ ಕಾಳಜಿಯಿಂದ ಮೂಡಿದ ಪ್ರಶ್ನೆ. 

"ಬಾಡಿಗೆ ಸ್ವಲ್ಪ ಜಾಸ್ತಿ. ಈ ವರ್ಷದ ಕೊನೆಯಲ್ಲಿ Promotion ಬಂದ್ರೆ.. ಅವನ ಸ್ಕೂಲ್ ಖರ್ಚು ಕಳೆಯುತ್ತೆ. " ಎಂದೆ. 

"Very Good" ಮತ್ತೆ ಮೌನ. ಕೆಲಹೊತ್ತಿನ ನಂತರ ಅವರೇ "ಅಲ್ಲಿ ಸಮಯ ಹೇಗೆ ಕಳೀತೀರ?" ಕೇಳಿದರು. 

"ಅಲ್ಲೇನು.. ಸೋಮವಾರದಿಂದ ಶುಕ್ರವಾರದವರೆಗೆ ಕತ್ತೆ ಥರ ದುಡಿಯೋದು. ಶನಿವಾರ ವೈಶಾಲಿಗೆ ಸಹಾಯ. ಭಾನುವಾರ.... I am Kishore's Father....ಅವನು ಹೇಳಿದ ಹಾಗೆ ಕುಣಿಬೇಕು. ಆರು ತಿಂಗಳು ಕಳೆಯೋದೆ ಗೊತ್ತಾಗೊಲ್ಲ.." ಎಂದು ಸಣ್ಣದಾಗಿ ನಗುತ್ತ ಹೇಳಿದೆ. 

"ಹೂ.. ಭಲೆ" ಅಪ್ಪ ತಲೆದೂಗಿದರು. ಮತ್ತೆ ಮೌನ. ಬೀದಿ ದೀಪದ ಬೆಳಕಿನಲ್ಲಿ ಅವರ ಮನಸ್ಸಿನ ಚಡಪಡಿಕೆ ಅವರ ಮುಖದ ಮೇಲೆ ಹಾದುಹೋಗುತ್ತಿದ್ದುದನ್ನು ಗಮನಿಸಿದೆ. 

ನಮ್ಮಿಬ್ಬರ ನಡುವೆ ಆಳವಾದ ಸಂಭಾಷಣೆ, ಮಾತುಕತೆಗಳು ಬಹಳ ಕಡಿಮೆ. ಅಮ್ಮನ ಬಳಿ ಸಲೀಸಾಗಿ ಎಲ್ಲವನ್ನು ಮಾತನಾಡುತ್ತಿದ್ದ ನಾನು ಅಪ್ಪನ ಬಳಿ ವಿಷಯಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಅವರು ಅಷ್ಟೇ, ನನ್ನೊಂದಿಗೆ ತಮಾಷೆಯೇ ಹೆಚ್ಚು - ಚಿಕ್ಕಂದಿನಿಂದಲೂ. ಇಂದು ಏನೋ ಮುಖ್ಯವಾದ ವಿಷಯ ಹೇಳಲು/ಕೇಳಲು ತವಕಿಸುತ್ತಿದ್ದಾರೆ.  

"ಕೃಷ್ಣ...ನೀನು, ವೈಶಾಲಿ, ಕಿಶೋರ..ಎಲ್ಲ ಇಲ್ಲೇ ಬಂದು ಯಾಕಿರಬಾರದು?" ಎಂದು ಅಪ್ಪ ಆಸೆ ಅಸಹಾಯಕತೆ ಬೆರೆತ ಧ್ವನಿಯಲ್ಲಿ ಕೇಳಿದರು. ಆ ಕ್ಷಣದಲ್ಲಿ ಅವರ ವಯಸ್ಸು ಎದ್ದು ಕಾಣುತಿತ್ತು. ತಲೆಯಲ್ಲಿ ಈಗ ಹೇರಳವಾದ ಬಿಳಿ ಕೂದಲು. ಅಲ್ಲಲ್ಲಿ ಒಳ ಹೋಗಿದ್ದ ಕೆನ್ನೆ, ಕ್ಷೀಣಿಸಿದ್ದ ಕಣ್ಣುಗಳಲ್ಲಿನ ಚೈತನ್ಯ - ಎಲ್ಲವನ್ನು ಗಮನಿಸಿದೆ. 

ಆದರೂ ಮತ್ತೊಂದೆಡೆ ಕೆಲಸದ ಒತ್ತಡ. ಮಹತ್ವಾಕಾಂಕ್ಷೆ. ಆರು ವರ್ಷ ಬಾಂಬೆಯಲ್ಲಿ ಕೆಲಸ ಮಾಡಿದರೆ ಉನ್ನತ ಹುದ್ದೆ ತಲುಪುವ ಅವಕಾಶ. ಅಪ್ಪ, ಅಮ್ಮ, ವೈಶಾಲಿ ಎಲ್ಲರಿಗೂ ಹೆಮ್ಮೆ. ಕಿಶೋರನಿಗೆ ಒಳ್ಳೆಯ ಭವಿಷ್ಯ. ಅಪ್ಪ ಅಮ್ಮನನ್ನು ನೋಡಲು ಆರು ತಿಂಗಳ ಬದಲು ಮೂರು ತಿಂಗಳಿಗೊಮ್ಮೆ ಬಂದರಾಯಿತು. ವಾರಕ್ಕೊಂದು ಟ್ರಂಕ್ ಕಾಲ್ ಮಾಡಿದರಾಯಿತು. 

ಇವೆಲ್ಲ ಸಮಜಾಯಿಷಿ ನೀಡಿ ಅಪ್ಪನ ಆಸೆಯನ್ನು ಕೆಲ ವರ್ಷಗಳ ಕಾಲ ಮುಂದೂಡಿಸಿದೆ. ರಜೆ ಮುಗಿಸಿ ಬಾಂಬೆ ತಲುಪಿದೆ. ಮಾತಿನಂತೆ ವಾರಕ್ಕೊಂದು ಟ್ರಂಕ್ ಕಾಲ್ ಶುರುವಾಯಿತು. ಎರಡು ಟ್ರಂಕ್ ಕಾಲ್ ಮಾಡಿದೆ. ಮೂರನೇ ಟ್ರಂಕ್ ಕಾಲ್ ಅವಶ್ಯಕತೆ ಇರಲಿಲ್ಲ. 

                                                    ********************************

"ಕಿಶೋರ-ಶ್ರುತಿ ಹೊರಡ್ತಾಇದಾರೆ ಕಣೋ " ರಸ್ತೆಯ ಆ ಬದಿಯಿಂದ ಕೂಗಿದ ಅಕ್ಷಯ್. ವೈಶಾಲಿ ನಾನು ಕಲ್ಬೆಂಚಿನ ಮೇಲೆ ಕೂತಿದ್ದೆವು. ಘಂಟೆ ರಾತ್ರಿ ಒಂಭತ್ತು ಮೀರಿತ್ತು. 

"ಟ್ಯಾಕ್ಸಿ ಬಂತು ಅನಿಸುತ್ತೆ. ಬನ್ನಿ, ಅವರಿಬ್ರನ್ನ ಕಳಿಸೋಣ" ಎಂದಳು ವೈಶಾಲಿ, ಅಪೇಕ್ಷೆಯಿಂದ. ನನ್ನ ಕೋಪ ತಣ್ಣಗಾಗಿರಲಿಲ್ಲ. 

"ಅವನಿಗೆ ನನ್ನ ಆಶೀರ್ವಾದದ ಅವಶ್ಯಕತೆ ಇದ್ದ ಹಾಗಿಲ್ಲ. ಕ್ರಿಶ್ಚಿಯನ್ನ ಮದುವೆಯಾದ ಮೇಲೆ...."ಮುಂದೆ ಏನೂ ಮಾತಾಡಲು ತೋಚಲಿಲ್ಲ. 

ಒಂದು ವಾರದ ಹಿಂದೆ ನಾನೇ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದು ನಿಜ. ಅವನ ಪ್ರೀತಿಗೆ, ಮದುವೆಗೆ, ವೈಶಾಲಿ, ಅಕ್ಷಯ್ನ  ಕುಟುಂಬ ಎಲ್ಲರೂ ಬೆಂಬಲ ನೀಡಿದ್ದರಿಂದ ನನಗೆ ಬೇರೆ ವಿಧಿಯಿರಲಿಲ್ಲ. ಆದರೆ ಅದರೊಂದಿಗೆ ರಾಜಿಯಾಗುವ ಮನಸ್ಥಿತಿ ನನಗಿನ್ನೂ ಬಂದಿರಲಿಲ್ಲ. 

"ಅವಳಿಗೇನು ಕಡಿಮೆಯಾಗಿದೆ..? ಲಕ್ಷಣವಾಗಿದ್ದಾಳೆ. ಅಮ್ಮ ಹಿಂದು. ಅಪ್ಪ ಕ್ರಿಶ್ಚಿಯನ್. ತಪ್ಪೇನು? ನಮ್ಮ ಸಂಸ್ಕಾರವು ಅವಳಿಗೆ ಸ್ವಲ್ಪ ಬರುತ್ತೆ. ಕ್ರಮೇಣವಾಗಿ ಹೇಳಿಕೊಟ್ರಾಯಿತು." ಎಂದು ವೈಶಾಲಿ ನಿಧಾನವಾಗಿ ತಿಳಿ ಹೇಳಿದಳು. ಈ ವಿಷಯದಲ್ಲಿ ಅವಳು ಹೊಂದಿಕೊಂಡ ರೀತಿ, ವೇಗ ಎರಡೂ  ಆಶ್ಚರ್ಯಕರವಾಗಿತ್ತು. ಒಬ್ಬನೇ ಮಗನ ಮದುವೆಯ ಸಂಭ್ರಮದಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದಳು. ಆ ವಿಷಯದಲ್ಲಿ ನಾನು ಹಿಂದೆ ಉಳಿದೆ ಎಂಬ ನಾಚಿಕೆ ನನ್ನದಾಗಿತ್ತು. 

"ಆದರೆ...ಆದರೆ..ಮದುವೆಗೆ ಮುಂಚೆ ಪ್ರೀತಿ ಮಾಡುವ ಅವಶ್ಯಕತೆ ಏನಿತ್ತು ಅವನಿಗೆ..?" ಎಂದು ವಾದಿಸಿದೆ. 

"ಆಹಾ..ಇದೆಂಥ ವಾದ ನಿಮ್ಮದು? ನೀವು ಹದಿನೇಳನೆ ವಯಸ್ಸಿನಲ್ಲೇ ಮೇಘ ಅನ್ನೋಳನ್ನ  ಪ್ರೀತಿಸಿದ್ದು?" ಎಂದು ವೈಶಾಲಿ ಮರುಪ್ರಶ್ನೆ ಮಾಡಿದಳು. ಅವಳ ತುಟಿಯಂಚಿನಲ್ಲಿ ಮೂದಲಿಸುವ ತುಂಟ ನಗು. ಮೂವತ್ತು ವರ್ಷ ಒಟ್ಟಾಗಿ ಕಳೆದಿದ್ದ ನಮ್ಮ ಮಧ್ಯೆ ಯಾವ ರಹಸ್ಯವೂ ಇರಲಿಲ್ಲ. ಮೇಘಾಳ ಬಗ್ಗೆ ನಾನೇ ಎಷ್ಟೋ ಬಾರಿ ಆಕೆಗೆ ಹೇಳಿದ್ದೆ. ಅವಳ ನಗುವನ್ನು ಕಂಡು ಮನಸ್ಸು ಎಷ್ಟೋ ಹಗುರವಾಯಿತು. ಆದರೂ ಕೋಪವನ್ನು ಬಿಟ್ಟುಕೊಡಬಾರದೆಂಬ ಹಠ. 

ಮತ್ತೊಂದು ವಾದ ಹುಡುಕುವುದರೊಳಗೆ ಟ್ಯಾಕ್ಸಿಯೊಂದು ಕಲ್ಬೆಂಚಿನ ಬಳಿ ಬಂದು ನಿಂತಿತು. ಕಿಶೋರ ಶ್ರುತಿ ಕಾರಿನಿಂದ ಇಳಿದರು. ಇಬ್ಬರ ಮುಖದಲ್ಲು ಹೊಸ ಜೀವನದ ಉತ್ಸಾಹ. 

"You know Shruthi...ಈ ಕಲ್ಬೆಂಚು ಹೆಚ್ಚು ಕಡಿಮೆ ನಮ್ಮ ಕುಟುಂಬದ ಆಸ್ತಿ. It's almost family heirloom. ನಾವೆಲ್ಲರು ಮನೆಯಲ್ಲಿ ಬೆಳೆಯೋದ್ರ ಜೊತೆ ಇಲ್ಲೂ ಬೆಳೆದ್ವಿ" ಎಂದು ಕಿಶೋರ ಕಲ್ಬೆಂಚನ್ನು ಶ್ರುತಿಗೆ ಪರಿಚಯ ಮಾಡಿಕೊಟ್ಟ. 

"ಅಪ್ಪ ಅಮ್ಮ ನೀವು ಇಲ್ಲೇ ಇದ್ದದ್ದು ಒಳ್ಳೇದೇ ಆಯಿತು. ಫ್ಲೈಟ್ಗೆ ಹೊತ್ತಾಯಿತು. ಆಶೀರ್ವಾದ ಮಾಡಿ" ಎಂದು ಇಬ್ಬರೂ ನಮಗೆ ನಮಸ್ಕರಿಸಿದರು. ತುಂಬು ಮನಿಸ್ಸಿನಿಂದಲೇ ಹಾರೈಸಿದರೂ ನಾನು ಅದನ್ನು ತೋರಿಸಿಕೊಳ್ಳಲಿಲ್ಲ. "ಒಳ್ಳೇದಾಗ್ಲಿ.." ಎಂದೆ. ವೈಶಾಲಿ ಶ್ರುತಿಯನ್ನು ತಬ್ಬಿ ಬೀಳ್ಕೊಟ್ಟಳು. ಇಬ್ಬರೂ ಟ್ಯಾಕ್ಸಿಯಲ್ಲಿ ಕುಳಿತರು. ನಾನು ತಡೆಯಲಾರದೆ "ಆಗಾಗ ಫೋನ್ ಮಾಡು ಕಿಶೋರ್" ಎಂದೆ. ವೈಶಾಲಿ ನನ್ನನೇ ನೋಡುತ್ತಿರುವುದು ನನಗೆ ಗೊತ್ತಿತ್ತು. ಟ್ಯಾಕ್ಸಿ ಹೊರಟು ಕಣ್ಮರೆಯಾಯಿತು. ನಾನು ವೈಶಾಲಿ ಮತ್ತೆ ಕಲ್ಬೆಂಚಿನ ಮೇಲೆ ಕುಳಿತೆವು. 

"ಸಾ...ಧಿಂ..ಚನೇ  ..." ಎಂದು ವೈಶಾಲಿ ತುಂಟತನದಿಂದ ಗುನುಗಿದಳು. ನಾನೂ ನನ್ನ ದನಿ ಸೇರಿಸಿದೆ... 

                                                      *********************************

ಕಿಶೋರನ ಮದುವೆಯಾದ ಮೂರು ವರ್ಷಕ್ಕೆ ವೈಶಾಲಿ ಕೊನೆಯುಸಿರೆಳೆದಳು. ಸಹಜವಾದ ಜ್ವರಕ್ಕೆ ಆಸ್ಪತ್ರೆ ಸೇರಿದ ಅವಳ ಆರೋಗ್ಯ ವಿಚಿತ್ರವಾಗಿ ಕುಸಿದು ಹದಿನೈದು ದಿನದಲ್ಲಿ ಎಲ್ಲವು ಮುಗಿದುಹೋಯಿತು. ಲಂಡನ್ನಲ್ಲಿದ್ದ ಕಿಶೋರ್ ಬರುವುದರೊಳಗೆ ಅವಳ ದೇಹವನ್ನು ಸುಟ್ಟಾಗಿತ್ತು. "ಕಿಶೋರ್ ಬರ್ತಿದಾನೆ ತಾನೇ?"ಎಂದು ಕೇಳಿ ಕಣ್ಮುಚ್ಚಿದ್ದ  ವೈಶಾಲಿ ಕಣ್ಣು ತೆರೆಯಲೇ ಇಲ್ಲ. 

ಆಗ ಕಿಶೋರನಿಗು  ನನಗು ಹೆಚ್ಚು ಮಾತಾಗಲೇ ಇಲ್ಲ. ಒಬ್ಬರ ಮೇಲೊಬ್ಬರಿಗೆ ನಿರರ್ಥಕವಾದ ಕೋಪ. ಇನ್ನು ಬೇಗ ಹೇಳಬೇಕಾಗಿತ್ತು ಎಂದು ಅವನು. ಅಷ್ಟು ಕಾಳಜಿಯಿದ್ದರೆ ಇದ್ದು ನೋಡಿಕೊಳ್ಳಬೇಕಾಗಿತ್ತು ಎಂದು ನಾನು. ಅಕ್ಷಯ್ ಸೇತುವೆಯಂತೆ ನಮ್ಮಿಬ್ಬರ ಮಧ್ಯೆ ನಿಂತು ಎಲ್ಲ ಕೆಲಸಗಳಿಗೂ ನೆರವಾದ. 

ಮೂರು ವಾರ ಕಳೆದ ಮೇಲೆ ಕಿಶೋರ್ ಶ್ರುತಿ ಲಂಡನ್ನಿಗೆ ವಾಪಸ್ಸಾದರು. ಇನ್ನಾರು ತಿಂಗಳಲ್ಲಿ ಮಗುವೊಂದನ್ನು ನಿರೀಕ್ಷಿಸುತ್ತಿರುವ ಸುದ್ದಿಯನ್ನು ಹೊರಡುವಾಗ ಕಿಶೋರ್ ಹೇಳಿದ. ಲಂಡನ್ನಿನಲ್ಲಿ   ಕೆಲಕಾಲ ಬಂದಿರಲು  ಒತ್ತಾಯ ಮಾಡಿದ. 

                                                  **********************************

ಮಧ್ಯಾಹ್ನದ ಬಿಸಿಲು ಕಡಿಮೆಯಾಗಿ ಸಂಜೆಯೆಡೆಗೆ ತಿರುಗುತ್ತಿತ್ತು. ಟ್ರಾಫಿಕ್ ಗಿಜಿಗಿಜಿ ಮತ್ತೆ ಕೇಳಲು ಶುರುವಾಯಿತು. ಮತ್ತದೇ ಎಂಭತ್ತರ ಮೈಭಾರ. ಆದರೆ ಯಾವುದೋ ಲೋಕ ವಿಹರಿಸಿ ಬಂದಷ್ಟು ಹಗುರವಾಗಿತ್ತು ಮನಸ್ಸು. ಏನೋ ನೆಮ್ಮದಿ. 

ದೂರದಲ್ಲಿ ರಂಗಪ್ಪ ನಡೆದು ಬರುತ್ತಿದ್ದ. ಮುಖದಲ್ಲಿ ಗಾಬರಿ. ಕಲ್ಬೆಂಚಿನ ಬಳಿ ಬಂದವನೆ

"ಮನೆಗೆ ಹೋದ್ರೆ ಬೀಗ ಹಾಕಿತ್ತು. ಹುಡುಕಿ ಹುಡುಕಿ ಸಾಕಾಯಿತು. ಸಧ್ಯ ಸಿಕ್ಕಿದ್ರಲ್ಲ. ನಡೀರಿ." ಎಂದು ಒಂದು ಕೈಯಲ್ಲಿ ನನ್ನನ್ನು ಹಿಡಿದೆಬ್ಬಿಸಿ ಮತ್ತೊಂದರಲ್ಲಿ ಔಷಧಿಯ ಪ್ಯಾಕೇಜ್ ತೆಗೆದುಕೊಂಡ. 

ಮತ್ತೆ ರಸ್ತೆ ಕ್ರಾಸ್ ಮಾಡಬೇಕಿತ್ತು. ರಂಗಪ್ಪನೇ ಕೈ ಹಿಡಿದು ದಾಟಿಸಿದ. ರಸ್ತೆ ದಾಟುವಾಗ ಅವನ ಮುಖವನ್ನು ನೋಡಿದರೆ ಅಲ್ಲೂ ಕಿಶೋರನ ಮುಖವೇ ಕಂಡಿತು. 

ರಸ್ತೆ ದಾಟಿದ್ದಾಯಿತು. "ರಂಗಪ್ಪ....ಇವತ್ತು ಯಾಕೋ ಕಿಶೋರ ಬಹಳ ನೆನಪಾಗ್ತಿದಾನೆ ಕಣಪ್ಪ.. " ಎಂದೆ. 

"ಓಹೋ ಅದಕ್ಕೆ ಇರ್ಬೇಕು...ಅವ್ರೆ ಫೋನ್ ಮಾಡಿದ್ರು" ರಂಗಪ್ಪ ಹೇಳಿದ. ನನಗೆ ಆಶ್ಚರ್ಯವಾಯಿತು. ಕಿಶೋರ್ ಸಾಮಾನ್ಯವಾಗಿ ಫೋನ್ ಮಾಡುತ್ತಿದ್ದದ್ದು ಶನಿವಾರ. ಈ ಸರಿ ಬುಧವಾರವೇ ಯಾಕೆ ಫೋನ್ ಮಾಡಿದ್ದ? 

"ಏನಂತೆ?" ಕೇಳಿದೆ. 

"ಮನೆಗೆ ಫೋನ್ ಮಾಡಿದ್ರಂತೆ. ನಿಮ್ಮ ಮೊಬೈಲಿಗೂ. ಎರಡು ಕಡೆ ಎತ್ತ್ಲಿಲ್ಲ ಅಂತ ಗಾಬರಿ ಇಂದ ನನಗೆ ಫೋನ್ ಮಾಡಿದ್ರು." 

ನಾನು ಮೊಬೈಲ್ ಮನೆಯಲ್ಲೇ ಮರೆತು ಬಂದಿದ್ದೆ. "ಸರಿ... ಏನಂತೆ?" ಮತ್ತೆ ಕೇಳಿದೆ. ಅವತ್ತೇನೋ ಮಗನ ಬಗ್ಗೆ ವ್ಯಾಮೋಹ ಹೆಚ್ಚೇ ಇತ್ತು. 

"ಬರ್ತಿದ್ದಾರಂತೆ...ಈ ಶನಿವಾರ. ಒಂದು ತಿಂಗಳ ರಜೆಗೆ. ಸಧ್ಯ..ನನಗೆ ನಿಮ್ಮಿಂದ ಸ್ವಲ್ಪ  ದಿನ ಬಿಡುಗಡೆ" ನಗುತ್ತ ಹೇಳಿದ ರಂಗಪ್ಪ. 

ಎಂಥ ಒಳ್ಳೆ ಸುದ್ದಿ! ಮಗ ಎರಡು ವರ್ಷದ ನಂತರ ಬರುತ್ತಿದ್ದಾನೆ. ಮೊಮ್ಮಗಳು ಧ್ವನಿಗೆ ಈಗ ಆರೇಳು ವರ್ಷ ವಯಸ್ಸಿರಬೇಕು. ಅವಳನ್ನು ಕಲ್ಬೆಂಚಿಗೆ ಕರೆತಂದು ಕೂರಿಸಿ ಕತೆ ಹೇಳಬಹುದು. 

" ರಂಗಪ್ಪ... ಮೊಮ್ಮಗಳನ್ನ ಕಲ್ಬೆಂಚಿನ ಮೇಲೆ ಕೂರಿಸಿಕೊಂಡು ಕತೆ ಹೇಳಬೇಕು.. ಪ್ರತಿ ಸಂಜೆ ನನ್ನನ್ನ ಕರಕೊಂಡು ಬರಕ್ಕಾಗುತ್ತ?" ಆಸೆಯಿಂದ ಕೇಳಿದೆ. ಯಾವ ಕತೆಗಳು ಅವಳಿಗೆ ಇಷ್ಟವಾಗಬಹುದು ಎಂದು ಆಗಲೇ ಮನಸ್ಸಿ ನ್ನಲ್ಲಿ ಪಟ್ಟಿ ಮಾಡಲು ಶುರುಮಾಡಿದೆ. 

"ಆ ಮಗು ನಿಮ್ಮ ಜೊತೆ ಇಲ್ಲಿವರೆಗು ಬಂದು.. ನಿಮ್ಮ ಹಳೆ ಕತೆಗಳನ್ನು  ಕೇಳಿದಳು...ಅದಾಯಿತು...."ಎಂಬ ರಂಗಪ್ಪನ ವ್ಯಂಗ್ಯ ಕಿವಿಗೆ ಬೀಳಲೇ ಇಲ್ಲ. 


                                                                                                              -   13th February 2021