ಬೀಳ್ಕೊಡುಗೆ
"ಅಪ್ಪ ಬಾತ್ ರೂಮಿನಲ್ಲಿ ಕುಸಿದು ಬಿದ್ರು ,ರಾಘವ" ರಮೇಶ ಹೇಳಿದ. ಅವನ ಧ್ವನಿ ಗದ್ಗದಿತವಾಗಿತ್ತು. ಗಾಬರಿ, ಅಸಹಾಯಕತೆಯನ್ನೂ ರಾಘವ ಗಮನಿಸಿದ. ದೂರದ ಜರ್ಮನಿಯಿಂದ ಫೋನ್ನಲ್ಲಿ ಮಾತಾಡುತ್ತಿದ್ದರೂ ಬೆಂಗಳೂರಿನ ತನ್ನ ಮನೆಯಲ್ಲಿ ಏನಾಗುತ್ತಿರಬಹುದೆಂಬ ಚಿತ್ರ ಅವನ ಕಣ್ಮುಂದೆ ಬರುತ್ತಿತ್ತು.
ರಮೇಶ ತನ್ನನ್ನು ಸಂಭಾಳಿಸಿಕೊಂಡು ಅಮ್ಮನನ್ನು ಸಮಾಧಾನ ಪಡಿಸಬೇಕು. ಯಾವುದೇ ಸಮಯ ವ್ಯರ್ಥ ಮಾಡದೆ ಆಂಬುಲೆನ್ಸ್ ಗೆ ಕರೆ ಮಾಡಿ ಅಪ್ಪನನ್ನು ಆಸ್ಪತ್ರೆಗೆ ರವಾನೆ ಮಾಡಬೇಕು. ಘಂಟೆ ರಾತ್ರಿ ಹತ್ತಾಗಿತ್ತು. ರಮೇಶನ ಮಗಳು ಸಂಧ್ಯಾಳಿಗೆ ಇನ್ನೂ ಮೂರು ವರ್ಷ. ಈ ಗದ್ದಲವನ್ನೆಲ್ಲ ಕಂಡು ಅಳುತ್ತಿರುತ್ತಾಳೆ. ರಮೇಶನ ಹೆಂಡತಿ ಪುಷ್ಪ ಅಮ್ಮನನ್ನು ಗಮನಿಸುತ್ತಿರುತ್ತಾಳೆ...
"ರಾಘವ..ಆಂಬುಲೆನ್ಸ್ ಬಂತು... ಈಗ ಆಸ್ಪತ್ರೆಗೆ ಹೋಗ್ತೀನಿ ನಾನು. ಆಮೇಲೆ ಫೋನ್ ಮಾಡ್ತೀನಿ." ದೂರದಲ್ಲೆಲ್ಲೋ ರಮೇಶನ ಧ್ವನಿ.
"ಸರಿ. ಏನಾದ್ರೂ ಮಾತಾಡೋದಿದ್ರೆ ಫೋನ್ ಮಾಡು" ಎಂದು ರಾಘವ ಫೋನ್ ಇಟ್ಟ.
ತಮ್ಮ ರಮೇಶನಿಗೆ ತಂದೆ-ತಾಯಿಯರ ಜವಾಬ್ದಾರಿ ವಹಿಸಿ ತಾನು ಜರ್ಮನಿಗೆ ಬಂದದ್ದು ಸರಿಯೋ, ತಪ್ಪೋ ಎಂಬ ದ್ವಂದ್ವ ರಾಘವನನ್ನು ಸದಾ ಕಾಡುತ್ತಲೇ ಇತ್ತು. ಸದ್ಯ, ಅವರ ಆರೋಗ್ಯದಲ್ಲಿ ಯಾವ ವ್ಯತ್ಯಯವು ಆಗದಿದ್ದ ಕಾರಣ ಇವನು ನಿರಾಳವಾಗಿದ್ದ. ಮಡದಿ ಮಾಲತಿ, ಮಗ ವಿಶ್ವಾಸ್ ನ ಜೊತೆ ಖುಷಿಯಾಗಿಯೇ ಕೆಲವು ವರ್ಷಗಳನ್ನು ಕಳೆದಿದ್ದ. ಇನ್ನೊಂದೆರಡು ವರ್ಷ ಇಲ್ಲೇ ಇದ್ದು ನಂತರ ಬೆಂಗಳೂರಿಗೆ ಮರಳಿ, ಅಪ್ಪ ಅಮ್ಮನನ್ನು ತನ್ನ ಜೊತೆಗೆ ಇರಿಸಿಕೊಳ್ಳುವ ಯೋಚನೆ ಅವನದ್ದು. ಆದರೆ ರಮೇಶನ ಫೋನ್ ಕಾಲ್ ಎಲ್ಲವನ್ನು ಬುಡಮೇಲು ಮಾಡಿತ್ತು.
"ಊಟಕ್ಕೆ ಬಾರಪ್ಪ" ಎಂದು ಐದು ವರ್ಷದ ವಿಶ್ವಾಸ್ ಮುದ್ದಾಗಿ ಕರೆದಾಗ, ಈ ಆಘಾತದಲ್ಲೂ ಒಂದು ಸಣ್ಣ ಚೈತನ್ಯ. ಡೈನಿಂಗ್ ಟೇಬಲ್ ಮುಂದೆ ಕೂತರೂ ರಾಘವನಿಗೆ ಏನು ತಿನ್ನುವ ಮನಸ್ಸಾಗಲಿಲ್ಲ. "ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದಾಗ ಅವನ ಕಣ್ಣಂಚಿನಲ್ಲಿ ಒಂದೆರಡು ಹನಿ ನೀರು. ಎದುರಲ್ಲಿ ಕುಳಿತ್ತಿದ್ದ ಮಾಲತಿ ಬಂದು ಇವನ ಪಕ್ಕದಲ್ಲಿ ಕುಳಿತಳು.
"ಏನು ಆಗೋದಿಲ್ಲ ರಾಘವ್. ಹೀ ವಿಲ್ ಬಿ ಓಕೆ" ಎಂದು ಸಮಾಧಾನ ನೀಡುವ ಪ್ರಯತ್ನ ಮಾಡಿದಳು. ಏನೂ ಅರಿಯದ ವಿಶ್ವಾಸ್ ತನ್ನ ಕೈ ಬೆರಳುಗಳನ್ನು ಅಪ್ಪನ ಕೈ ಬೆರಳುಗಳೊಂದಿಗೆ ಸೇರಿಸಿದ್ದ.
***************************************
ಜರ್ಮನಿಯಲ್ಲಿ ಘಂಟೆ ರಾತ್ರಿ ಹನ್ನೊಂದಾಗಿತ್ತು. ಅಂದರೆ ಬೆಂಗಳೂರಿನಲ್ಲಿ ಎರಡೂವರೆ ಸುಮಾರು. ರಾಘವ ಫೋನ್ ಪಕ್ಕದಲ್ಲೇ ಕುಳಿತಿದ್ದ. ರಮೇಶ ಆಸ್ಪತ್ರೆ ವಿವರವನ್ನು ವಾಟ್ಸಪ್ಪ್ ಮೂಲಕ ಕಳಿಸಿದ್ದ. ಹೈಟೆಕ್ ಆಸ್ಪತ್ರೆಗೇ ಅಪ್ಪನನ್ನು ಸೇರಿಸಿದ್ದ.
"ದುಡ್ಡಿನ ಬಗ್ಗೆ ಏನೂ ಯೋಚ್ನೆ ಮಾಡ್ಬೇಡ" ಎಂಬ ರಾಘವನ ಸಂದೇಶವನ್ನು ರಮೇಶ ನೋಡಿದ್ದ. ಆದರೆ ಉತ್ತರಿಸಿರಲಿಲ್ಲ. ರಾಘವನಿಗೆ ಸಣ್ಣ ಅಳುಕು. ಬಹುಶಃ ಇಂಥ ಸಮಯದಲ್ಲಿ ತಾನು ದುಡ್ಡಿನ ವಿಚಾರ ಎತ್ತ ಬಾರದಿತ್ತು. ಆದರೆ ಅವನಿಗೂ ಉದ್ವೇಗ. ಅಪ್ಪನಿಗೆ ಏನಾಗಿರಬಹುದು, ಡಾಕ್ಟರ್ ಏನು ಹೇಳಿದರು ಎಂದು ತಿಳಿಯುವ ತವಕ. ಯಾವುದೇ ಸಂದೇಶ ಬಂದಿಲ್ಲವೆಂದು ತಿಳಿದಿದ್ದರೂ ಐದೈದು ನಿಮಿಷಕ್ಕೂ ಫೋನ್ ನೋಡುತ್ತಲೇ ಇದ್ದ.
ಇನ್ನು ಸುದ್ದಿಗಾಗಿ ಕಾಯಲಾಗದೆ ರಮೇಶನಿಗೆ ಫೋನ್ ಮಾಡಿದ. ಒಂದೇ ರಿಂಗಿನಲ್ಲಿ ರಮೇಶ ಉತ್ತರಿಸಿದ.
"ಅಣ್ಣ...ಇನ್ನು ಮಲ್ಗಿಲ್ವೇನೋ?" ಸಹಜವಾಗಿ ಕೇಳಿದ ರಮೇಶ.
"ನಿದ್ದೆ ಹೇಗೋ ಬರುತ್ತೆ...ಅಲ್ಲಿಂದ ಏನೂ ಸುದ್ದೀ ನೇ ಇಲ್ಲ... "
"ಗಾಬರಿಯಾಗ್ಬೇಡ ರಾಘವ... ಅಪ್ಪನಿಗೆ ಹಾರ್ಟ್ ಅಟ್ಯಾಕ್ ಆಗಿದ್ಯಂತೆ. ಇಪ್ಪತ್ನಾಲ್ಕು ಘಂಟೆ ಅಬ್ಸರ್ವೇಷನ್ ಅಂತೆ. ಐ.ಸಿ.ಯು ನಲ್ಲಿ ಇಟ್ಟಿದ್ದಾರೆ. " ರಮೇಶ ಹೇಳಿದ. ಅವನ ಧ್ವನಿ ಶಾಂತವಾಗಿಯೇ ಇತ್ತು.
"ಹಾಂ...." ಒಂದು ಕ್ಷಣ ರಾಘವನಿಗೆ ಏನು ತೋಚಲಿಲ್ಲ. ಮೌನವಾಗಿದ್ದ. "ಸರಿ. ಈಗ ಜ್ಞಾನ ಬಂದಿದ್ಯ?" ಕೇಳಿದ.
"ಇಲ್ಲವಂತೆ. ನನಗೆ ಒಳಗೆ ಹೋಗೋ ಅವಕಾಶ ಇಲ್ಲ. ಐ.ಸಿ.ಯು ಆಚೆ ಕೂತಿದೀನಿ. " ರಮೇಶ ಹೇಳಿದ.
"ಅಮ್ಮ ಹೇಗಿದ್ದಾಳೆ?" ರಾಘವ್ ಕೇಳಿದ. ಅವಳನ್ನು ತಕ್ಷಣ ನೋಡುವ ಮನಸ್ಸಾಯಿತು.
"ಪುಷ್ಪ ನೋಡ್ಕೋತಿದಾಳೆ. ಸ್ವಲ್ಪ ಶಾಕ್ ಆಗಿದ್ಲು. ಆಗುತ್ತೆ ಅಲ್ವಾ..... ಈಗ ಮಲಗಿರಬಹುದು. ಬೆಳಗ್ಗೆ ಮಾತಾಡು. "
"ಹೂ..ಸರಿ. ನೀನು ಹುಷಾರು. ನಾನು ಬರ್ಬೇಕಾದ್ರೆ ಹೇಳು....ತಕ್ಷಣ ಹೊರ್ಡ್ತೀನಿ. ಇಲ್ಲ ಅಪ್ಪ ಮನೆಗೆ ಬಂದ ತಕ್ಷಣ ಬರ್ತೀನಿ."
"ಸರಿ ಅಣ್ಣ.. ಆತುರ ಬೇಡ. ಸದ್ಯಕ್ಕೆ ಪರಿಸ್ಥಿತಿ ಕಂಟ್ರೋಲ್ ನಲ್ಲಿದೆ. ಆಂಬ್ಯುಲೆನ್ಸ್ನಲ್ಲಿ ನನಗೆ ಒಂದೆರಡು ನಿಮಿಷ ಕೈಕಾಲೇ ಆಡ್ಲಿಲ್ಲ. ಈಗ ಪರವಾಗಿಲ್ಲ." ಮೊದಲ ಬಾರಿಗೆ ರಮೇಶ ತನ್ನ ಒತ್ತಡವನ್ನು ತೋಡಿಕೊಂಡ.
"ಸರಿ. ಸ್ವಲ್ಪ ರೆಸ್ಟ್ ತೊಗೊ....ಕಷ್ಟ...ಗೊತ್ತು.." ರಾಘವನಿಗೆ ಮುಂದೆ ಏನು ಮಾತಾಡಲು ತೋಚಲಿಲ್ಲ.
"ಸರಿ ರಾಘವ.. "ಎಂದು ರಮೇಶ ಫೋನಿಟ್ಟ.
ಅತ್ತ ರಾಘವನಿಗೆ ಒಂದೊಂದು ನಿಮಿಷವೂ ಒಂದೊಂದು ಯುಗದಂತಿದ್ದರೆ, ಇತ್ತ ರಮೇಶನಿಗೆ ಸಮಯದ ಪರಿವೇ ಇರಲಿಲ್ಲ. ಕಳೆದ ಮೂರ್ನಾಲ್ಕು ಘಂಟೆಗಳಲ್ಲಿ ಏನೆಲ್ಲಾ ನಡೆದುಹೋಗಿತ್ತು. ಅಪ್ಪ ಬಚ್ಚಲುಮನೆಯಲ್ಲಿ ಯಾವಾಗ ಕುಸಿದರು ಯಾರಿಗೂ ಗೊತ್ತಿಲ್ಲ. ಊಟ ಮಾಡಿ ಕೈ ತೊಳೆಯಲು ಹೋದವರು ಹತ್ತು ನಿಮಿಷವಾದರೂ ಹೊರಬಾರದಿದ್ದಾಗ ಸಂಧ್ಯಾ ತುಂಟತನದಿಂದ ಬಾಗಿಲು ತಟ್ಟಲು ಶುರುಮಾಡಿದಳು. ಆ ಕಡೆಯಿಂದ ಉತ್ತರವೇ ಇಲ್ಲದಿದ್ದಾಗ ರಮೇಶನಿಗೆ ಗಾಬರಿಯಾಯಿತು. ಅವನು, ಪುಷ್ಪ, ಅಮ್ಮ ಎಲ್ಲರು ಬಾಗಿಲನ್ನು ಜೋರಾಗಿ ಬಡಿದರು. ಉತ್ತರವೇ ಇಲ್ಲ. ಅಮ್ಮ ಕಂಗಾಲಾಗಿ ಸೋಫಾದ ಮೇಲೆ ಕುಳಿತರು. ರಮೇಶ ಪಕ್ಕದ ಮನೆ ಜಾನಿಯನ್ನು ಕರೆದು ಇಬ್ಬರು ಬಲ ಪ್ರಯೋಗ ಮಾಡಿ ಬಾಗಿಲನ್ನು ಒಡೆದರು. ನೋಡಿದರೆ ಅಪ್ಪ ನೆಲದ ಮೇಲೆ ಬಿದ್ದಿದ್ದಾರೆ. ಜ್ಞಾನವೇ ಇಲ್ಲ. ಕ್ಷೀಣವಾಗಿ ಉಸಿರಾಡುತ್ತಿದ್ದಾರೆ. ಯಾವುದೋ ಮಾಯದಲ್ಲಿ ಪುಷ್ಪ ಅಂಬ್ಯುಲನ್ಸಗೆ ಫೋನ್ ಮಾಡಿದ್ದಳು. ಆಕೆಯ ಸಮಯ ಪ್ರಜ್ಞೆ ಮೆಚ್ಚಲೇಬೇಕು. ಹತ್ತೇ ನಿಮಿಷದಲ್ಲಿ ಆಂಬುಲೆನ್ಸ್ ಮನೆಯ ಮುಂದಿತ್ತು. ಅಷ್ಟರೊಳಗೆ ಆಕೆ ಇವನಿಗೆ ಸ್ವಲ್ಪ ದುಡ್ಡು, ಫ್ಲಾಸ್ಕ್ ನೀರು, ಕ್ರೆಡಿಟ್ ಕಾರ್ಡ್, ಪವರ್ ಬ್ಯಾಂಕ್ ಜೊತೆಗೆ ಒಂದು ಹೊದಿಕೆಯನ್ನು ತಯಾರು ಮಾಡಿದ್ದಳು. ಕಂಗಾಲಾಗಿ ಕುಳಿತ್ತಿದ್ದ ಅತ್ತೆಯನ್ನು ನಿಧಾನವಾಗಿ ಕೇಳಿ ಮಾವನ ಕನ್ನಡಕ, ಒಂದೆರಡು ಬಟ್ಟೆ ಹಾಗು ಅವರ ಬಿ.ಪಿ. ಮಾತ್ರೆಯನ್ನು ಪ್ಯಾಕ್ ಮಾಡಿದ್ದಳು. Stretcherನಲ್ಲಿದ್ದ ಅಪ್ಪನ ಜೊತೆ ರಮೇಶ ಆಂಬುಲೆನ್ಸ್ ಏರಿದ. "ಯೋಚ್ನೆ ಮಾಡ್ಬೇಡ. ಮನೆ ನಾ ನೋಡ್ಕೋತೀನಿ . ಮಾವನ್ನ ನೋಡ್ಕೋ" ಎಂದು ಸ್ಥೈರ್ಯ ನೀಡಿ ಕಳಿಸಿದ್ದಳು.
ರಮೇಶ ಐ. ಸಿ. ಯು. ಬಾಗಿಲನ್ನು ದಿಟ್ಟಿಸಿ ನೋಡಿದ. ಬೆಳಗ್ಗೆ ಡಾಕ್ಟರ್ ಬರುವವರೆಗೂ ಯಾವ ಖಚಿತ ಸುದ್ದಿಯೂ ಬರುವಂತೆ ಕಾಣಲಿಲ್ಲ. ಚಡಪಡಿಕೆ ತಾಳಲಾರದೆ ಡ್ಯೂಟಿ ನರ್ಸ್ ಬಳಿ ಹೋಗಿ "ಮಿಸ್ಟರ್ ರಾಧಾಕೃಷ್ಣ ಹೇಗಿದ್ದಾರೆ?" ಎಂದ. "ಏನೂ ತೊಂದ್ರೆ ಇಲ್ಲ ಬಿಡ್ರಿ" ಎಂದು ನರ್ಸ್ ಸ್ವಲ್ಪ ಲಘುವಾಗಿ ಹೇಳಿದಳು. ರಮೇಶ ಕೋಪ ಬಂದರು ತಾಳ್ಮೆ ಕಳೆದುಕೊಳ್ಳಲಿಲ್ಲ. ಏನೂ ಮಾತಾಡದೆ ತನ್ನ ಜಾಗಕ್ಕೆ ಹಿಂದಿರುಗಿದ. ನರ್ಸ್ಗೆಗೆ ಏನನ್ನಿಸಿತೋ. "ಸಾರ್.. ಅವ್ರು ಮಲಗಿದ್ದಾರೆ. ಐ. ಸಿ. ಯು. ನಲ್ಲಿ ನೋ ನ್ಯೂಸ್ ಇಸ್ ಗುಡ್ ನ್ಯೂಸ್ ಸಾರ್. " ಎಂದು ಸಮಾಧಾನದ ಮಾತಾಡಿದಳು.
**********************************
"ನೋ ನ್ಯೂಸ್ ಇಸ್ ಗುಡ್ ನ್ಯೂಸ್.... ರಾಘವ" ರಮೇಶ ಬೆಳಗ್ಗೆ ಅಣ್ಣನಿಗೆ ಹೇಳಿದ. ರಾಘವನಿಗೆ ಕೊಂಚ ನೆಮ್ಮದಿ. ಪರಿಸ್ಥಿತಿ ಹೆಚ್ಚೇನೂ ಬದಲಾಗಿರಲಿಲ್ಲ. ಆದರೆ ರಮೇಶನ ಧ್ವನಿಯಲ್ಲಿ ಧೈರ್ಯ. ಅತ್ತ ಪುಷ್ಪಾಳಿಗು ಫೋನ್ ಮಾಡಿದ್ದ. ಅಮ್ಮ ಶಾಂತವಾಗಿದ್ದಳು. "ಪುಷ್ಪ ಮಗಳ ಹಾಗೆ ನಿಂತು ನನ್ನನ್ನ ನೋಡ್ಕೋತಿದಾಳೆ" ಎಂದಾಗ ಸಂತೋಷವೂ ಆಯಿತು. ತಾನು ಅಲ್ಲಿಲ್ಲವಲ್ಲ ಎಂಬ ಸಂಕಟವೂ ಆಯಿತು.
"ನನಗೂ ಇಲ್ಲಿ ಬಹಳ ಕಷ್ಟವಾಗ್ತಿದೆ. ಅಪ್ಪ ಬಂದ ತಕ್ಷಣ ಹೊರಟು ಬರ್ತೀನಿ. " ಎಂದ ರಾಘವ.
"ಹೂ ರಾಘವ...ನೋಡೋಣ.. ಏನೇನಾಗುತ್ತೋ.. "ಎನ್ನುತ್ತಾ ಅಮ್ಮ ಫೋನ್ ಇಟ್ಟಳು.
ಇತ್ತ ವಿಶ್ವಾಸ್ ಪುಟ್ಟ ಪುರಂದರ ದಾಸರ ವೇಷ ಧರಿಸಿ ತಂದೆಯ ಮುಂದೆ ಬಂದು ನಿಂತ. ಅಂದು ಅವನ ಶಾಲೆಯ ವಾರ್ಷಿಕೋತ್ಸವ. ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಾಗಿ ಒಂದು ವಾರದಿಂದಲೇ ತಯಾರಿ ನಡೆದಿತ್ತು. ಧರಿಸಿದರೆ ದಾಸರ ವೇಷವನ್ನೇ ವಿಶ್ವಾಸ್ ಧರಿಸಬೇಕು ಎಂಬ ತನ್ನ ಮಾತನ್ನು ಮಾಲತಿ ಸಂಪೂರ್ಣವಾಗಿ ಒಪ್ಪಿದ್ದಳು. ವಿಶ್ವಾಸ್ ಗೆ ದಾಸರ ಬಗ್ಗೆ ಸಣ್ಣ ಕತೆ ಹೇಳಿ, ಅವನು ವೇದಿಕೆ ಮೇಲೆ ಹೋಗಿ "ಅಂದು ನವಕೋಟಿ ನಾರಾಯಣ, ಇಂದು ಪುರಂದರ ದಾಸ" ಎಂದು ಇಂಗ್ಲಿಷ್ನಲ್ಲಿ ಹೇಳಬೇಕು ಎಂದು ನಿರ್ಧಾರವಾಗಿತ್ತು.
ವಿಡಿಯೋ ಕಾಲ್ ನಲ್ಲಿ ಅಪ್ಪನಿಗೆ ಇದನ್ನು ಹೇಳಿದಾಗ, ಅಪ್ಪ "ಇಷ್ಟೇ ಮಾಡಿದ್ರೆ ಏನು ಸುಖ ? ಅಲ್ಲಿರೋ ರಿಗೆ ಏನು ತಿಳಿಯೊಲ್ಲ. ರಾಘವ..ದಾಸರ ಬಗ್ಗೆ ಒಂದು ಸಣ್ಣ ಟಿಪ್ಪಣಿ ಮಾಡಿ ಹಂಚು....ಆಮೇಲೆ....ವಿಶ್ವಾಸ್ ಗೆ ನಾ ಹೇಳ್ಕೊಡ್ತೀನಿ....ಈ ದಾಸರ ಪದದ ಎರಡು ಸಾಲು ಹಾಡ್ಲಿ 'ಜಗದೋದ್ಧಾರನ....ಆಡಿಸಿದಳೆ ಯಶೋಧೆ.. " ಎಂದು ಹೇಳಿಕೊಟ್ಟರು. ತೊದಲು ನುಡಿಯಲ್ಲಿ ಮುದ್ದಾಗಿ ವಿಶ್ವಾಸ್ ಅದನ್ನು ಒಪ್ಪಿಸಿದ್ದು ಕೇಳಿ ಅವರಿಗೆ ಎಷ್ಟೋ ಖುಷಿ.
"ಲೇ ರಾಘವ..ಅಲ್ಲೇ ಸಂಗೀತದ ಕ್ಲಾಸ್ ಇದ್ರೆ ಸೇರಿಸೋ..." ಎಂದಿದ್ದರು.
ಇಂದು ವಾರ್ಷಿಕೋತ್ಸವದ ಕಾರ್ಯಕ್ರಮ ಮುಗಿದಮೇಲೆ ಅಲ್ಲಿಂದಲೇ ಅಪ್ಪನಿಗೆ ಕರೆ ಮಾಡುವುದೆಂದು ಮಾತಾಗಿತ್ತು.
ಮನಸಿಲ್ಲದ ಮನಸ್ಸಿನಿಂದ ರಾಘವ ಕಾರ್ಯಕ್ರಮಕ್ಕೆ ತಯಾರಾದ. ಮಾಲತಿ "ಇಲ್ಲಿ ಕೂತು ನಾವೇನು ಮಾಡೋಕ್ಕಾಗಲ್ಲ. ಅಲ್ಲಿ ಸ್ವಲ್ಪ ಹೊತ್ತು ನೀವೂ ಯೋಚನೆಯಿಂದ ದೂರವಿರಬಹುದು. ಹೇಗಿದ್ರು ರಮೇಶ್ ಫೋನ್ ಮಾಡ್ತಾರಲ್ಲ..."ಎಂದಳು.
ಕಾರ್ ಹತ್ತುವ ವೇಳೆಗೆ ರಮೇಶನಿಂದ ಕರೆ ಬಂತು. "ರಾಘವ...ಅಪ್ಪನಿಗೆ ಆಪರೇಷನ್ ಮಾಡಬೇಕಂತೆ. ಇನ್ನೆರಡು ಘಂಟೇಲಿ. ನಾನು ಒಪ್ಪಿಗೆ ಕೊಟ್ಟಾಯಿತು. . ರಾತ್ರಿ ಮೇಲೆ ಗೊತ್ತಾಗುತ್ತೆ..ಮುಂದೇನು ಅಂತ"
"ಹಾಗಾದ್ರೆ...ನಾ ಈಗ್ಲೇ ಹೊರಡಲ?" ರಾಘವ ಕೇಳಿದ.
"ಬೇಡ...ಆ.. ರಾತ್ರಿ ಹೇಳ್ತಿನಿ" ಇತ್ತ ರಮೇಶನಿಗೂ ಕಸಿವಿಸಿ. ಇತ್ತ ರಾಘವ ತಕ್ಷಣಕ್ಕೆ ಬಂದು ಮಾಡುವುದೇನು ಇರಲಿಲ್ಲ. ತಾನೇ ಅಪ್ಪನನ್ನು ಒಂದೆರಡು ನಿಮಿಷ ನೋಡಿದ್ದಿರಬೇಕು, ಐ. ಸಿ. ಯು. ಗೆ ಸೇರಿಸಿದ ಮೇಲೆ. ಆದರೆ, ತನ್ನ ಮಾತು ಕೇಳಿ, ಅವನು ಬರದೇ ಅಪ್ಪನಿಗೆ ಏನಾದರೂ...?
ಏನಾದರೂ ಆಗಲಿ, ರಾತ್ರಿ ಆಪರೇಷನ್ ಮುಗಿದ ಮೇಲೆ ಅವನನ್ನು ಕರೆಸಿಕೊಳ್ಳಲು ನಿರ್ಧರಿಸಿದ.
*******************************************
ರಾತ್ರಿ ಒಂಭತ್ತಾಗಿತ್ತು. ರಾಘವನಿಂದ ರಮೇಶನಿಗೆ ವಿಡಿಯೋಸಹಿತ ಸಂದೇಶ. "ಅಪ್ಪನಿಗೆ ತೋರಿಸು" ಎಂದು. ವಿಶ್ವಾಸ್ ಪುರಂದರ ದಾಸರ ವೇಷದಲ್ಲಿ ವೇದಿಕೆ ಮೇಲೆ ನಿಂತು "ಜಗದ್ದೋದ್ದಾರನ...." ಹಾಡುತ್ತಿದ್ದಾನೆ. ಅಪ್ಪನ ತಾಲೀಮು ಎಂದು ರಮೇಶನಿಗೂ ತಿಳಿದಿತ್ತು.
ಅಮ್ಮ, ಪುಷ್ಪ, ಸಂಧ್ಯಾ ಎಲ್ಲರು ಇವನೊಂದಿಗೆ ಆಸ್ಪತ್ರೆಯಲ್ಲೇ ಬೀಡು ಬಿಟ್ಟಿದ್ದರು. ಮೌನವಾಗಿ ಕೂತಿದ್ದವರಿಗೆ ರಮೇಶ ವಿಶ್ವಾಸ್ ನ ವಿಡಿಯೋ ತೋರಿಸಿದ. ಅವನ ತಾಯಿಗೆ ಮೊಮ್ಮಗನ ವೇಷ ಕಂಡು ಸಣ್ಣದಾದ ನೆಮ್ಮದಿಯ ನಗು.
"ತದ್ರೂಪು ರಾಘವನೇ . ನಿಮ್ಮ ತಂದೆ ಎರಡನೇ ಕ್ಲಾಸಿನಲ್ಲಿ ರಾಘವನಿಗೆ ಈ ವೇಷ ಹಾಕ್ಸಿದ್ರು" ಎಂದಳು.
"ಓ ಹೌದ... ಈ ವಿಷಯ ಗೊತ್ತೇ ಇರಲಿಲ್ಲ...ಅದಕ್ಕೆ ರಾಘವನಿಗೆ ಈ ಉಪಾಯ ಹೊಳೆದಿರೋದು"
"ಒಂದು ಮಟ್ಟಿಗೆ ದಾಸರ ಪದ ಹಾಡ್ತಿದ್ರು, ನಿಮ್ಮ ಮಾವ...ಈಗ ಬಿಟ್ಟಿದ್ದಾರೆ" ಎಂದು ತನ್ನ ಗಂಡನ ಹೊಸ ಪರಿಚಯ ಮಾಡಿಕೊಡುವಂತೆ ಪುಷ್ಪಳಿಗೆ ಹೇಳಿದಳು.
"ಮನೆಗೆ ಬಂದ ಮೇಲೆ ಮತ್ತೆ ಹಾಡ್ಸೋಣ ಬಿಡಿ" ಎಂದಳು ಪುಷ್ಪ.
"ಯಾಕೋ ಕಾಣೆ...ನನಗೆ ನಾನೇ ಧೈರ್ಯ ತಂದ್ಕೋತಾ ಇದ್ದೀನಿ." ಎಂದು ರಮೇಶನ ತಾಯಿ ಶೂನ್ಯ ನೋಟವನ್ನು ಬೀರಿದಳು.
************************************
ರಾಘವ ಜರ್ಮನಿಯಿಂದ ಹೊರಟಾಗಿತ್ತು. ವಿಮಾನದಲ್ಲಿ ಅಪ್ಪ ಪ್ರಯಾಣ ಮಾಡುವಾಗ ಮೋಡಗಳ ಆಕಾರಗಳನ್ನು ಗಮನಿಸುತ್ತ ಖುಷಿ ಪಡುತ್ತಿದ್ದುದು ನೆನಪಾಯಿತು. ವಿಮಾನಗಳ ರೂಟ್ ನೆನಪಿಟ್ಟುಕೊಳ್ಳುವ ವಿಚಿತ್ರ ಹವ್ಯಾಸ ಅವರದ್ದು.
"ಆಪರೇಷನ್ ಮುಗೀತು.ಅಬ್ಸರ್ವೇಷನ್ ಅಂತೆ. ನೀನು ಹೊರಟು ಬಾ...."ಎಂದು ದೂರವಾಣಿ ಮಾಡಿದಾಕ್ಷಣ ಹೊರಟಿದ್ದ. ಮಾಲತಿ,ವಿಶ್ವಾಸ್ ರನ್ನು ಕರೆದುಕೊಂಡು ಬರುವ ತಾಳ್ಮೆ ಇರಲಿಲ್ಲ.
ಪ್ರಯಾಣದುದ್ದಕ್ಕೂ ಅಪ್ಪನದೇ ಫೋಟೋ ವಿಡಿಯೋಗಳು, ಐ ಪ್ಯಾಡ್ ನಲ್ಲಿ. ಅವರ-ಅಮ್ಮನ ಇಪ್ಪತೈದನೇ ಮದುವೆ ವಾರ್ಷಿಕೋತ್ಸವ, ಮಹಾಬಲೇಶ್ವರ ಪ್ರವಾಸ, ಕಶ್ಮೀರ ಪ್ರವಾಸ; ಅಲ್ಲಿನ ದಲ್ ಸರೋವರದಲ್ಲಿನ ದೋಣಿಯಲ್ಲಿ ಅಪ್ಪ ಅಮ್ಮನಿಗೆ ಹೂ ನೀಡಿದ್ದು, ಜರ್ಮನಿಗೆ ಬಂದು ವಿಶ್ವಾಸ್ ನನ್ನು ಮೊದಲ ಬಾರಿ ಎತ್ತುಕೊಂಡಿದ್ದು ಎಲ್ಲವನ್ನು ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ ನೋಡಿದ. ಕಿಟಕಿಯಿಂದಾಚೆ ಮೋಡಗಳಲ್ಲೂ ಅಪ್ಪನ ಮುಖವನ್ನೇ ಕಂಡ.
ತಾನು ಜರ್ಮನಿಗೆ ಹೊರಟಾಗ, "ನನಗೂ ನಿಮ್ಮಮ್ಮನಿಗೂ ಎಪ್ಪತ್ತಾಗುವುದರೊಳಗೆ ನೀನು ಇಲ್ಲಿಗೆ ವಾಪಸ್ಸಾಗಬೇಕು..."ಎಂಬ ಅವರ ಷರತ್ತನ್ನು ಇವನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅಪ್ಪ ಗುಣವಾದರೆ ಈಗಲೇ ಜರ್ಮನಿಯಿಂದ ಸಂಸಾರ ಸಮೇತ ಹಿಂದಿರುಗುತ್ತೇನೆ ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಕೊಂಡ.
ಇತ್ತ ಅಮ್ಮ, ಪುಷ್ಪ ಮನೆಗೆ ಹಿಂದಿರುಗಿದ್ದರು. ಅಪ್ಪನ ಆಪರೇಷನ್ ನಂತರ ಅರ್ಧ ಘಂಟೆ ಅವರ ಪಕ್ಕದಲ್ಲಿ ಕೂರಲು ಅಮ್ಮನಿಗೆ ಅವಕಾಶ ಮಾಡಿಕೊಟ್ಟಿದ್ದರು. ಅಪ್ಪನಿಗೆ ಇನ್ನು ಜ್ಞಾನ ಬಂದಿರಲಿಲ್ಲ. ಆದರೆ ಅಮ್ಮನಿಗೆ ಏನೋ ನೆಮ್ಮದಿ. ಡಾಕ್ಟರ್ ರಮೇಶನನ್ನು ಕರೆದು "ಆಪರೇಷನ್ ಮಾಡಿದ್ದೀವಿ. ಯಾವುದಕ್ಕೂ ಸ್ವಲ್ಪ ಸಮಯ ಬೇಕು. He is responding, though" ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟರು. ಪುಷ್ಪಳ ಹತ್ತಿರ ಹೇಳಿಕೊಂಡ ರಮೇಶ, ಅಮ್ಮನಿಗೆ ತಿಳಿಸಲಿಲ್ಲ. ರಾಘವನಿಗೆ ಫೋನ್ ಮಾಡಿ ಹೊರಡಲು ಹೇಳಿದ್ದ.
***************************************
ರಾತ್ರಿಯೆಲ್ಲ ರಮೇಶ ಐ.ಸಿ.ಯು. ಮುಂದೆ ಕುಳಿತ್ತಿದ್ದ. ಮುಂಜಾನೆ ವೇಳೆಗೆ ಐ.ಸಿ.ಯು. ಒಳಗೆ ಏನೋ ಗದ್ದಲ, ಚಟುವಟಿಕೆ. ಒಳಗೂ -ಹೊರಗೂ ಓಡಾಡುತ್ತಿದ್ದ ನರ್ಸ್ ಗಳು ಇವನನ್ನೇ ಕಳವಳದಿಂದ ನೋಡುತ್ತಿದ್ದರು. ರಮೇಶನಿಗೆ ಗಾಬರಿಯಾಯಿತು. ಐ.ಸಿ.ಯು. ಡೆಸ್ಕ್ ಬಳಿ ಹೋಗಿ "ನರ್ಸ್, ಏನಾಯಿತು? ಯಾಕೆ ಏನೋ ಟೆನ್ಶನ್ನಲ್ಲಿ ಓಡಾಡುತ್ತಿದ್ದಾರೆ ಎಲ್ಲರು?" ಎಂದು ಕೇಳಿದ.
ಆಕೆಗೆ ಒಂದು ಕ್ಷಣ ಏನು ಹೇಳಲೂ ತೋಚಲಿಲ್ಲ. ನಿಧಾನವಾಗಿ "ಸಾರ್...ನಿಮ್ಮ ತಂದೆ ಆರೋಗ್ಯ ಮತ್ತೆ ಏರುಪೇರಾಗಿದೆ. ಡ್ಯೂಟಿ ಡಾಕ್ಟರ್ ನೋಡ್ತಿದಾರೆ. ಸ್ಪೆಷಲಿಸ್ಟ್ ಬರ್ತಿದಾರೆ..ನೀವು ಕೂತಿರಿ" ಎಂದಳು.
ರಮೇಶನಿಗೆ ತನ್ನ ಕಾಲುಗಳ ಶಕ್ತಿಯೇ ಉಡುಗಿಹೋದಂತಾಯಿತು. ನರ್ಸ್ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಳು. ಅವನಿಗೆ ಏನೂ ಕೇಳಿಸಲಿಲ್ಲ. ಐ.ಸಿ.ಯು. ನಿಂದ ಆಚೆ ಬಂದ ಡ್ಯೂಟಿ ಡಾಕ್ಟರ್ ಇವನ ಹೆಗಲ ಮೇಲೆ ಕೈ ಹಾಕಿ ಅವನನ್ನು ಅಲ್ಲೇ ಇದ್ದ ಸೋಫಾದ ಮೇಲೆ ಕೂರಿಸಿದರು. ಪರಿಸ್ಥಿತಿಯ ವಿವರಣೆ ನೀಡಿದರೋ ಏನೋ - ರಮೇಶನಿಗೆ ಯಾವುದೂ ಅರ್ಥವಾಗಲಿಲ್ಲ.
"ಸೋ...ಮಿಸ್ಟರ್ ರಮೇಶ್.. ಮಿಸ್ಟರ್ ರಾಧಾಕೃಷ್ಣ ಈಗ ಲೈಫ್ ಸಪ್ಪೋರ್ಟ್ ನಲ್ಲಿದ್ದಾರೆ. ನೀವು ಹೇಳಿದಾಗ... ಯಾರಾದ್ರೂ ಕಡೆ ಬಾರಿ ನೋಡೋರಿದ್ರೆ.... " ರಮೇಶ ಡಾಕ್ಟರ್ ಅವರ ವಾಕ್ಯಗಳನ್ನು ಪೂರ್ಣಗೊಳಿಸಲು ಹಿಂಜರಿಯುತ್ತಿದ್ದುದನ್ನು ಗಮನಿಸಿದ. ಅವನೂ ತನ್ನ ತಾಯಿಗೆ, ರಾಘವನಿಗೆ ಈ ಸುದ್ದಿ ಹೇಳುವಾಗ ಹಾಗೆ ಮಾಡಬೇಕೇನೋ..? ಎಂದು ಯೋಚಿಸಿದ.
ಸೌಜನ್ಯದ ಸಲುವಾಗಿ ಡ್ಯೂಟಿ ಡಾಕ್ಟರ್ ಇವನೊಂದಿಗೆ ಹತ್ತು ನಿಮಿಷ ಕೂತಿದ್ದರು. ಐ.ಸಿ.ಯು.ನ ನರ್ಸ್ ಬಂದು ಇವನನ್ನು ಒಳಗೆ ಕರೆದೊಯ್ದಳು. ಒಳಗೆ ಅಪ್ಪ ಲೈಫ್ ಸಪೋರ್ಟ್ ನಲ್ಲಿ. "ಆಪರೇಷನ್ ಆದ್ಮೇಲೆ ಅಪ್ಪನಿಗೆ ಜ್ಞಾನ ಬರ್ಲಿಲ್ವಾ?" ಕೇಳಿದ ರಮೇಶ್. ಇಲ್ಲ ಎಂದು ನರ್ಸ್ ತಲೆ ಅಲ್ಲಾಡಿಸಿದಳು. ಸಾವಿನ ಬಗ್ಗೆ ರಮೇಶ ಒಂದೆರಡು ಬಾರಿ ತಂದೆಯೊಡನೆ ಚರ್ಚಿಸಿದ್ದ. ಅವರಿಬ್ಬರಿಗೂ ಸಾವಿನ ಬಗ್ಗೆ ಕುತೂಹಲ.
"ಕಡೆಯ ಕ್ಷಣದವರೆಗೂ ನನಗೆ ಜ್ಞಾನ ಇರಬೇಕು ರಮೇಶ.. ..ಸಾವು ಅಂದ್ರೆ ಏನೂಂತ ನನಗೆ ಗೊತ್ತಾಗಬೇಕು." ಎಂದು ಹೇಳಿದ್ದರು.
"ಇಲ್ಲಪ್ಪ... ನನಗೆ ಆ ಅನುಭವವೇ ಬೇಡ.." ಎಂದು ಇವನು ಹೇಳಿದ್ದ.
"ಬದುಕಿನಂತೆ ಸಾವು ಕೂಡ ಒಂದು ಅನುಭವ ರಮೇಶ..."ಎಂದಿದ್ದರು. ಅಂಥವರಿಗೆ ಜ್ಞಾನ ಹೋಗಿ ಎರಡು ದಿನವಾಗಿತ್ತು. ಬಾತ್ ರೂಮಿನಲ್ಲಿ ಜ್ಞಾನ ಹೋಗುವ ಮುನ್ನ ಅಪ್ಪ ಏನು ಯೋಚನೆ ಮಾಡುತ್ತಿದ್ದಿರಬಹುದು? ಇವನಿಗೆ ನೆನಪಾಗಿದ್ದು ಅಪ್ಪ ತಮ್ಮ ಊಟ ಮುಗಿಸಿ, ಸಂಧ್ಯಾಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಮೊಸರನ್ನ ತಿನ್ನಿಸಿದ್ದು. ಯಾಕೋ ಏನೋ, ರಮೇಶ ಅದರ ಫೋಟೋ ತೆಗೆದಿದ್ದ. ಈಗ ನಿಶ್ಚಲವಾದ ಅವರ ದೇಹದ ಮುಂದೆ ನಿಂತು ಆ ಫೋಟೋ ನೋಡಿದ.
ನಿಟ್ಟುಸಿರು ಬಿಡುತ್ತ ಐ.ಸಿ.ಯು. ನಿಂದ ಆಚೆ ಬಂದ . ಮನಸ್ಸು ಮುಂದೆ ನಡೆಯಬಹುದಾದ ಘಟನೆಗಳೊಂದಿಗೆ ರಾಜಿಯಾಗುತ್ತಿತ್ತು. ನಿರ್ವಾಹವಿಲ್ಲದೆ ಪುಷ್ಪಾಳಿಗೆ ಫೋನ್ ಮಾಡಿದ. ಬೇರೆಯೇನೂ ಹೇಳದೆ "ಅಮ್ಮನಿಗೆ ಕೊಡು" ಎಂದ. ಸುತ್ತಿ ಬಳಸಿ ಮಾತಾಡುವುದು ಅಮ್ಮನಿಗೆ ಎಂದೂ ಇಷ್ಟವಿರಲಿಲ್ಲ.
"ಅಮ್ಮ...ಅಪ್ಪ ಉಳಿಯೊಲ್ವಂತೆ. ಲೈಫ್ ಸಪೋರ್ಟ್. ಅವರನ್ನ ಕಡೆ ಬಾರಿ ಜೀವಂತವಾಗಿ ನೋಡೋದಿದ್ರೆ ಬಂದು ನೋಡ್ಲಿ ಅಂದ್ರು ಡಾಕ್ಟರ್." ಎಂದು ಒಂದೇ ಉಸಿರಲ್ಲಿ ಹೇಳಿ ಮುಗಿಸಿದ. ಅವನ ಎದೆ ವೇಗವಾಗಿ ಬಡಿದುಕೊಳ್ಳುತ್ತಿತ್ತು. ಅಮ್ಮ ಹೇಗೆ ಪ್ರತಿಕ್ರಿಯಿಸುವಳೋ ಎಂಬ ಭಯ, ಉದ್ವೇಗ. ಕೆಲವು ಕ್ಷಣ ಆ ಕಡೆಯಿಂದ ಯಾವುದೇ ಮಾತು ಕೇಳಿಸಲಿಲ್ಲ. ಅಮ್ಮ ಅಳುತ್ತಿರಬೇಕು. ಸದ್ಯ, ಅವಳ ಆರೋಗ್ಯಕ್ಕೆ ಏನು ತೊಂದರೆಯಾಗದಿದ್ದರೆ ಸಾಕು ಎಂಬ ಯೋಚನೆ ಹಾದು ಹೋಯಿತು. ಆ ಕಡೆ ಮತ್ತೆ ಅಮ್ಮನ ಧ್ವನಿ.
"ಒಂದು ಕೆಲಸ ಮಾಡು. ನಾನೇನು ಬರೋದಿಲ್ಲ. ರಾಘವ ಬಂದಮೇಲೆ ನೀವಿಬ್ಬರೇ ಅವರನ್ನ ಕರೆದುಕೊಂಡು ಬನ್ನಿ.." ಎಂದು ದಿಟ್ಟವಾಗಿ ಹೇಳಿದಳು.
"ಆದರೆ ಅಮ್ಮ.." ಎಂದು ರಮೇಶ ಶುರು ಮಾಡಿದ.
"ಇಲ್ಲ ಪರವಾಗಿಲ್ಲ. ನಾ ಹೇಳಿದಷ್ಟು ಮಾಡು ರಮೇಶ.." ಎಂದು ಹೇಳಿ ಫೋನ್ ಇಟ್ಟಳು.
****************************************
ಬೆಂಗಳೂರು ತಲುಪಿದ ರಾಘವ ಆಸ್ಪತ್ರೆಗೆ ಧಾವಿಸಿದ. ರಮೇಶ ಕೂತಿದ್ದಲ್ಲಿಗೆ ಬಂದ. ಇಬ್ಬರು ಒಬ್ಬರನ್ನೊಬ್ಬರು ನೋಡಿಕೊಂಡರು. ರಮೇಶನ ಮುಖ ನೋಡಿದಾಗಲೇ ರಾಘವನಿಗೆ ಅರ್ಧದಷ್ಟು ವಿಷಯ ತಿಳಿದು ಹೋಯಿತು."ಸರಿ...ಏನಂತೆ ಈಗ?" ಕೇಳಿದ.
"ಲೈಫ್ ಸಪೋರ್ಟ್, ಅಣ್ಣ. ನೀನು ಬರ್ಲಿ ಅಂತ ಕಾಯ್ತಿದ್ದೆ." ದುಃಖದಿಂದ ಹೇಳಿದ ರಮೇಶ. ಅಮ್ಮನಿಗೆ, ಪುಷ್ಪಾಳಿಗೆ ತೋರಿಸದ ಉದ್ವೇಗ ಅಣ್ಣನೆದುರು ಸರಾಗವಾಗಿ ಹರಿಯಿತು.
"ನಾನು ಅವರನ್ನು ನೋಡಬಹುದ?" ಎಂದ ರಾಘವ, ಗದ್ಗದಿತವಾಗಿ. ನರ್ಸ್ ಇಬ್ಬರನ್ನೂ ಒಳಗೆ ಬಿಟ್ಟಳು.
ಈ ಲೋಕದ ಪರಿವೆ ಇಲ್ಲದೆ ಮಲಗಿದ್ದ ಅಪ್ಪನನ್ನು ನೋಡುವುದು ರಾಘವನಿಗೆ ಕಷ್ಟವಾಯಿತು. ಅದರಲ್ಲೂ ವಾರದ ಹಿಂದೆ ಲವಲವಿಕೆಯಿಂದ ಮಿಡಿಯುತ್ತಿದ್ದ ಜೀವ. ಎಷ್ಟೋ ಹೊತ್ತು ಅವರನ್ನೇ ನೋಡುತ್ತಾ ನಿಂತಿದ್ದ. ರಮೇಶನೇ ಮೌನ ಮುರಿದು, "ಇನ್ನೇನು ಮಾಡಲು ಸಾಧ್ಯವಿಲ್ಲ ಅಣ್ಣ. We should take a call" ಎಂದ. ಒಪ್ಪುವುದು ಕಷ್ಟವಾದರೂ ಅದು ಸರಿಯಾದ ಮಾತು ಎಂದು ರಾಘವನಿಗೆ ಗೊತ್ತಿತ್ತು.
"ಅಪ್ಪನಿಗೆ ಈ ಸಾಯುವ ಹೊತ್ತು ,ಘಳಿಗೆ....ನಂಬಿಕೆಯಿತ್ತ?" ಕೇಳಿದ.
"ಇಲ್ಲಣ್ಣ. ಸಾಯುವಾಗ ಜ್ಞಾನ ಇರಬೇಕು ಅಂತ ಆಸೆ ಇತ್ತು...ಅಷ್ಟೇ" ಅವರನ್ನೇ ನೋಡುತ್ತಾ ಹೇಳಿದ ರಮೇಶ್.
"ಹೇಗೆ ಕಳಿಸಿಕೊಡೋದು? ಡಾಕ್ಟರ್ ಗೆ ಹೇಳಿದ್ರೆ ಎಲ್ಲ ಮುಗೀತಾ? ಅಷ್ಟೇನಾ?" ಕೇಳಿದ ರಾಘವ. ಒಂದು ಸಣ್ಣ ಮಾತು ಬದುಕಿಗೂ, ಸಾವಿಗೂ ಇರುವ ವ್ಯತ್ಯಾಸವ?
"ಅಷ್ಟೇ ಇರಬೇಕು..ಎಲ್ಲಾದ್ರೂ ಸಹಿ ಹಾಕಿಸಬಹುದು"
"ಇಲ್ಲ... I want to give him a proper send-off" ಹೇಳಿದ ರಾಘವ. ಎಲ್ಲೋ ಏನೋ ಅಪೂರ್ಣವಾಗಿತ್ತು. ಅಪ್ಪನಿಗೆ ಇಷ್ಟವಾಗುವ, ತನಗೆ ನೆಮ್ಮದಿ ತರುವುದನ್ನೇನಾದರೂ ಮಾಡಬೇಕು ಎಂದು ಅವನ ಮನಸ್ಸು ಹಾತೊರೆಯುತ್ತಿತ್ತು. ಒಂದೈದು ನಿಮಿಷ ಚಡಪಡಿಸಿದ. ಬಳಿಕ ಅದೇನನ್ನಿಸಿತೋ ಫೋನ್ ತೆಗೆದು ಅವರ ಕಿವಿಯ ಪಕ್ಕದಲ್ಲಿಟ್ಟ. "ಜಗದೋದ್ಧಾರನ...ಆಡಿಸಿದಳೆ ಯಶೋಧೆ" ಎಂಬ ವಿಶ್ವಾಸ್ ನ ತೊದಲ್ನುಡಿಯ ಹಾಡು ಅವರ ಕಿವಿಯ ಮೇಲೆ ಬಿತ್ತು. ಅವರ ಅಸ್ತಿತ್ವದ ಯಾವುದೋ ಒಂದು ಭಾಗ ಮೊಮ್ಮಗನ ಹಾಡು ಕೇಳಿರಬಹುದು ಎಂದು ತನಗೆ ತಾನೇ ಸಾಂತ್ವನ ಹೇಳಿಕೊಂಡ. ಹಾಡು ಮುಗಿದ ಮೇಲೆ ಒಂದೆರಡು ನಿಮಿಷ ಅವರನ್ನು ನೋಡಿ
"ನಡಿ ಹೋಗೋಣ ರಮೇಶ" ಎಂದ. ಇಬ್ಬರೂ ಐ.ಸಿ.ಯು. ನಿಂದ ಆಚೆ ಬಂದರು.
ಡ್ಯೂಟಿ ಡಾಕ್ಟರ್ ಪತ್ರದೊಂದಿಗೆ ಸಿದ್ಧವಾಗಿದ್ದರು. ರಾಘವ, ರಮೇಶ ಮುಖಮುಖ ನೋಡಿಕೊಂಡರು. "ನೀನೆ ಸಹಿ ಹಾಕು" ಎಂದು ಹೇಳಿ ರಾಘವ ಮಾಲತಿಗೆ ಕರೆ ಮಾಡಲು ಹೋದ.
ನಡುಗುತ್ತಿದ್ದ ಕೈಗಳಿಂದ ರಮೇಶ ಸಹಿ ಮಾಡಿದ. ಆ ಕ್ಷಣವನ್ನು ಅವನು ಮರೆಯುವುದು ಎಂದೂ ಸಾಧ್ಯವಿರಲಿಲ್ಲ. "ಹೋಗಿ ಬನ್ನಿ ಅಪ್ಪ" ಎಂದು ತಂದೆಯನ್ನು ನೆನೆದು ಅಲ್ಲೇ ಇದ್ದ ಚೇರ್ ಮೇಲೆ ಕುಸಿದು ಕುಳಿತ.......
- 15th February 2022
Very very touching. Nice narration of the incidents and feelings of Raghava who is away from his parents.
ReplyDeleteThanks a lot! Would be nice to know who this is :)
DeleteSakkattagide... as usual... you are so talented dear Aloka
ReplyDeleteThanks a lot Sir!
Delete